ಬಡಾವಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಸಿರು ನಳನಳಿಸುತ್ತಿರಬೇಕು. ಆಹ್ಲಾದಕರ ವಾತಾವರಣ, ಜ್ಞಾನ ಬಂಡಾರ, ಸಾಧಕರ ಪ್ರೇರಣೆಯುಂಟುಮಾಡುವ ರೀತಿಯಲ್ಲಿಟ್ಟುಕೊಳ್ಳಲು ಕೆಲ ನಗರಗಳಲ್ಲಿ ಪಾಲಿಕೆಯ ವತಿಯಿಂದ ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ.
ಆದರೆ ತಾಲ್ಲೂಕಿನ ಮೇಲೂರಿನ ಗ್ರಾಮದ ಮುತ್ತೂರು ರಸ್ತೆಯ ಹೊಯ್ಸಳ ಬಡಾವಣೆಯ ನಾಗರಿಕರು ಸ್ವಯಂಪ್ರೇರಿತರಾಗಿ ತಮ್ಮ ಬಡಾವಣೆಯನ್ನು ಮಾದರಿಯಾಗಿಸಿದ್ದಾರೆ. ಬಡಾವಣೆಗೆ ಹೋಗುವ ದಾರಿಯುದ್ದಕ್ಕೂ ಇರುವ ಆಸ್ಪತ್ರೆ ಕಾಂಪೋಂಡ್ ಗೋಡೆಯ ಮೇಲೆ ಸರ್.ಎಂ.ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ಕುವೆಂಪು, ಬಸವಣ್ಣ, ಕಿತ್ತೂರು ರಾಣಿ ಚನ್ನಮ್ಮ, ಗೌತಮ ಬುದ್ಧ, ದ.ರಾ.ಬೇಂದ್ರೆ, ಮಾಸ್ತಿ, ಕೈಲಾಸಂ, ತ್ರಿವೇಣಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದವರ ವರ್ಣಚಿತ್ರಗಳನ್ನು ಜೊತೆಯಲ್ಲಿ ಅವರ ಕುರಿತಾದ ಮಾಹಿತಿಯೊಂದಿಗೆ ಚಿತ್ರಿಸಲಾಗಿದೆ. ಗೋಡೆಯ ಮುಂದಿನ ಚರಂಡಿಯನ್ನು ಕಲ್ಲು ಚಪ್ಪಡಿಗಳಿಂದ ಮುಚ್ಚಿ, ಚಿತ್ರಗಳ ನಡುವೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು, ಅಲ್ಲಲ್ಲಿ ಪಕ್ಷಿಗಳಿಗೆ ಆಹಾರವಾದ ಧಾನ್ಯಗಳನ್ನು ಮತ್ತು ನೀರನ್ನು ಇಡಲು ಸ್ಟಾಂಡ್ಗಳನ್ನು ಇಡುವ ಯೋಜನೆ ರೂಪಿಸಲಾಗಿದೆ.
ವಿಶೇಷವೆಂದರೆ, ಒಂದೊಂದು ಚಿತ್ರಕ್ಕೂ ಬಡಾವಣೆಯ ಒಬ್ಬೊಬ್ಬರು ಹಣ ನೀಡಿದ್ದಾರೆ. ಗುಣಮಟ್ಟದಲ್ಲಿ ರಾಜಿಯಾಗದೆ ದಾರಿಯಲ್ಲಿ ಸಾಗುವವರು ಸಾಧಕರನ್ನು ಕಂಡು ಹೆಮ್ಮೆ ಪಡುವಂತೆ ಚಿತ್ರಗಳನ್ನು ಬಿಡಿಸಿ ಜೊತೆಗೆ ವಿವರಗಳನ್ನು ಕೊಡಲಾಗಿದೆ.
‘ಸ್ವಚ್ಛಭಾರತ್ ಅಭಿಯಾನ ಪ್ರಾರಂಭವಾದಾಗ ನಮ್ಮ ಬಡಾವಣೆಯ ಜನರಲ್ಲೂ ಈ ಬಗ್ಗೆ ಚಿಂತನೆ ನಡೆದುದರ ಫಲವಿದು. ಹೊಸಕೋಟೆಯ ಚಿರು ಆರ್ಟ್ಸ್ನ ಭಾನು ಎಂಬ ಕಲಾವಿದನನ್ನು ಕರೆಸಿ ಮೊದಲು ನಮ್ಮ ಬಡಾವಣೆಯ ಹೆಸರನ್ನು ಜೊತೆಯಲ್ಲಿ ಹೊಯ್ಸಳ ಲಾಂಚನವನ್ನೂ ಚಿತ್ರಿಸಲು ಹೇಳಿದೆವು. ಬಡಾವಣೆಯ ನಾಗರಿಕರು ಸ್ವಪ್ರೇರಣೆಯಿಂದ ತಾವೊಂದು ಚಿತ್ರಕ್ಕೆ ನಾವೊಂದು ಚಿತ್ರಕ್ಕೆ ಎಂಬಂತೆ ಹಣ ನೀಡಲು ಮುಂದಾಗಿ ತಲಾ 1,200 ರೂಪಾಯಿಗಳು ಕೊಟ್ಟು ವಿವಿಧ ಮಹನೀಯರ ಚಿತ್ರಗಳನ್ನು ಅವರ ಬಗ್ಗೆ ಮಾಹಿತಿಯನ್ನೂ ಚಿತ್ರಿಸಲಾಯಿತು. ನಮ್ಮ ಅದೃಷ್ಟಕ್ಕೆ ಬಡಾವಣೆಯ ದಾರಿಯಲ್ಲಿ ಆಸ್ಪತ್ರೆಯ ಗೋಡೆಯಿದ್ದು, ಚಿತ್ರ ಬರೆಸಲು ಅನುಕೂಲವಾಯಿತು. ಇನ್ನೂ ಬರೆಸಲು ಆಸಕ್ತರಿದ್ದರೂ ಕಾಂಪೋಂಡ್ ಗೋಡೆಯಿದ್ದಷ್ಟು ಮಾತ್ರ ಬರೆಸಲು ಸಾಧ್ಯವಾಗಿದೆ. ಇನ್ನು ಮುಂದಿನ ಹಂತವಾಗಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು, ಅಲ್ಲಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯಗಳನ್ನು ಮತ್ತು ನೀರನ್ನು ಇಡಲು ಸ್ಟಾಂಡ್ಗಳನ್ನು ಇಡುವ ಯೋಜನೆ ರೂಪಿಸಲಾಗಿದೆ. ಇದು ಒಬ್ಬರ ಕೆಲಸವಲ್ಲ ಹಲವರ ಪರಿಶ್ರಮ ಈ ಕಾರ್ಯದಲ್ಲಿದೆ’ ಎಂದು ಬಡಾವಣೆಯ ವ್ಯಕ್ತಿಯೊಬ್ಬರು ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.
- Advertisement -
- Advertisement -
- Advertisement -
- Advertisement -