Home News ಮೇಲೂರಿನ ಗಂಗಾದೇವಿಯ ಜಾತ್ರಾ ಮಹೋತ್ಸವ

ಮೇಲೂರಿನ ಗಂಗಾದೇವಿಯ ಜಾತ್ರಾ ಮಹೋತ್ಸವ

0

ತಾಲ್ಲೂಕಿನ ಮೇಲೂರು ಅತ್ಯಂತ ಪುರಾತನ ಗ್ರಾಮದೇವತೆ ಗಂಗಾದೇವಿಯ ಜಾತ್ರಾ ಮಹೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಾಗಿ ಪ್ರಾರಂಭವಾಯಿತು.
ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಪ್ರಾರಂಭವಾದ ಜಾತ್ರಾ ಮಹೋತ್ಸವದಲ್ಲಿ ಗಾರ್ಡಿ ಬೊಂಬೆ, ಕೀಲುಕುದುರೆ ಮತ್ತು ವಿವಿಧ ವೇಷಭೂಷಣಗಳು ವಾದ್ಯ ವೃಂದದೊಂದಿಗೆ ಗಮನಸೆಳೆದವು.
ವಾಲ್ಮೀಕಿ ಮತಸ್ಥರಿಂದ ಪ್ರತಿ ವರ್ಷ ನಡೆಸುವ ಸೊಪ್ಪಿನ ವ್ರತಕ್ಕೆ ಹಲವಾರು ಮಂದಿ ಭಕ್ತರು ಸಾಕ್ಷಿಯಾದರು. ಕೋರಿಕೆಗಳ ಬಾಯಿಬೀಗವನ್ನು ಭಕ್ತರಿಂದ ನಡೆಸಲಾಯಿತು.
ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ನೂರಾರು ಮಂದಿ ಗ್ರಾಮಸ್ಥರು ಆಗಮಿಸಿದ್ದರು.
ಒಂಬತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವವು ಮಂಗಳವಾರ ವಾಲ್ಮೀಕಿ ಮತಸ್ಥರಿಂದ ಗಂಗಾದೇವಿಗೆ ಬೇವಿನ ಸೊಪ್ಪಿನ ತೇರನ್ನು ರಚಿಸುವುದರ ಮೂಲಕ ಮೊದಲಾಯಿತು. ಬೇವಿನ ಮರದಲ್ಲಿ ಪುಟ್ ರಥವನ್ನು ತಯಾರಿಸಿ ಅದನ್ನು ಬೇವಿನ ಸೊಪ್ಪಿನಿಂದ ಅಲಂಕರಿಸಿ ದೇವಿಗೆ ಮುದ್ದೆ ಮತ್ತು ಸೊಪ್ಪಿನ ಸಾರನ್ನು ಎಡೆಯಾಗಿ ಇರಿಸಿಕೊಂಡು, ರಥವನ್ನೆಲ್ಲಾ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾ ದೇವಾಲಯದ ಬಳಿಗೆ ತರಲಾಯಿತು. ಇದು ಸುಮಾರು ಮುನ್ನೂರು ವರ್ಷಗಳಿಗೂ ಹಿಂದಿನ ಆಚರಣೆಯಾಗಿದ್ದು, ತಪ್ಪದೆ ನಡೆಸಿಕೊಂಡು ಬರುತ್ತಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಗ್ರಾಮಸ್ಥರು ಬೇವಿನಸೊಪ್ಪಿನ ತೇರನ್ನು ಗ್ರಾಮದಲ್ಲೆಲ್ಲಾ ಮೆರವಣಿಗೆ ಮಾಡಿದಾಗ ವಾದ್ಯವೃಂದ, ಗಾರಡಿಬೊಂಬೆ ವಿಶೇಷ ಆಕರ್ಷಣೆಯಾಗಿತ್ತು. ರಾತ್ರಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾದರು. ನಂತರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿಯು ಎಲ್ಲರನ್ನೂ ಮನರಂಜಿಸಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗಂಗಾದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಬುಧವಾರ ಬೆಳಗಿನ ಜಾವ ದೀಪಾರತಿಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮಸ್ಥರು ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.
‘ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಬ್ರಹ್ಮರಥೋತ್ಸವವನ್ನು ಆಚರಿಸುತ್ತೇವೆ. ನಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಮೇಲೂರಿನ ಶ್ರೀನಿವಾಸ್ ತಿಳಿಸಿದರು.