ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯವಿಲ್ಲದೆ, ಮಂಗಳವಾರ ರಾತ್ರಿ ಬಿದ್ದ ಮಳೆ ನೀರು ಒಡೆದ ಶೀಟಿನ ಮೂಲಕ ಗೂಡಿನ ಮೇಲೆ ಬಿದ್ದು ಸುಮಾರು ಒಂದು ಲಕ್ಷ ರೂಗಳಿಗೂ ಅಧಿಕ ನಷ್ಟವುಂಟಾಗಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ರೈತರು ರಾತ್ರಿ ತಮಗೆ ನಿಗದಿಪಡಿಸಿರುವ ಜಾಲರಾದಲ್ಲಿ ಗೂಡನ್ನು ಹರಡಿಕೊಂಡಿದ್ದರು. ಏಕಾಏಕಿ ಮಳೆ ಪ್ರಾರಂಭವಾದಾಗ ಮೇಲೆ ಸೂರಿನ ಶೀಟ್ಗಳ ಒಡೆದಿದ್ದರಿಂದ ನೇರವಾಗಿ ರೇಷ್ಮೆ ಗೂಡಿನ ಮೇಲೆ ಬೀಳತೊಡಗಿದೆ. ತಕ್ಷಣವೇ ರೈತರು ನ್ಯೂಸ್ ಪೇಪರ್, ಪ್ಲಾಸ್ಟಿಕ್ ಪೇಪರ್, ಗೋಣಿ ಚೀಲ ತಂದು ಮುಚ್ಚಲು ಪ್ರಯತ್ನಿಸಿದರೂ ಸುಮಾರು 300 ಕೆಜಿಗೂ ಅಧಿಕ ರೇಷ್ಮೆ ಗೂಡು ನಾಶವಾಗಿದೆ.
ಮಾರುಕಟ್ಟೆಯಲ್ಲಿ ಕೋಟ್ಯಾಂತರ ವ್ಯವಹಾರ ನಡೆಯುತ್ತಿದ್ದರೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ಸೂಕ್ತ ದೀಪದ ವ್ಯವಸ್ಥೆಯಿಲ್ಲ, ಕುಡಿಯುವ ನೀರು, ಶೌಚಾಲಯವೂ ಇಲ್ಲ. ಮಳೆ ಬಂದಾಗ ಕನಿಷ್ಠ ಆಸರೆಯೂ ಇಲ್ಲದಂತಾಗಿ ಕಷ್ಟಪಟ್ಟು ಬೆಳೆದ ಗೂಡು ನಾಶವಾಗಿದೆ. ಈಗಾಗಲೇ ಗೂಡಿನ ಬೆಲೆ ಕನಿಷ್ಠ ಮಟ್ಟಕ್ಕೆ ಕುಸಿದು ರೈತ ಸಂಕಷ್ಟದಲ್ಲಿರುವಾಗ ಈ ರೀತಿ ಸೌಲಭ್ಯಗಳ ಕೊರತೆಯಿಂದ ನಷ್ಟವಾದರೆ ಯಾರು ಹೊಣೆ. ಅಧಿಕಾರಿಗಳ ನಿರ್ಲಕ್ಷದಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಈ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರು ದೂರಿದರು.
ನಷ್ಟ ಪರಿಹಾರವನ್ನು ಕೊಡಿಸುವಂತೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ರೈತರು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿ ರತ್ನಯ್ಯಶೆಟ್ಟಿಗೆ ಮನವಿ ಸಲ್ಲಿಸಿದರು.
- Advertisement -
- Advertisement -
- Advertisement -