ನಗರದಲ್ಲಿ ಶುಕ್ರವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಸ್ಲಿಂ ಯುವಕರು ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಎತ್ತುಗಳನ್ನು ಸಿಂಗರಿಕೊಂಡು ಮೆರವಣಿಗೆಯಲ್ಲಿ ಕರೆದೊಯ್ದು ಸಾಮರಸ್ಯವನ್ನು ಸಾರಿದರು.
ಮಹಬೂಬ್ನಗರದ ವಾಸಿಗಳಾದ ಷಫೀವುಲ್ಲಾ, ವಲೀಬಾ ಮತ್ತು ಮಹಬೂಬ್ಪಾಷ ತಮ್ಮ ಎತ್ತುಗಳನ್ನು ತೊಳೆದು ಸಿಂಗರಿಸಿ, ಕುಂಕುಮವಿರಿಸಿ, ಬಣ್ಣದ ಪೇಪರ್ ಮತ್ತು ಬೆಲೂನುಗಳನ್ನು ಕಟ್ಟಿ ಚಿಂತಾಮಣಿ ರಸ್ತೆಯಲ್ಲಿ ಆಂಜನೇಯಸ್ವಾಮಿ ದೇವಾಲಯದ ಬಳಿ ಕಿಚ್ಚು ಹಾಯಿಸಲು ಕರೆದೊಯ್ದರು.
ಶಿಡ್ಲಘಟ್ಟ ನಗರದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಗಳಲ್ಲಿ ಉತ್ತಮ ರೇಷ್ಮೆ ತಯಾರಾಗಲು ನೀರಿನ ಗುಣಮಟ್ಟ ಬಹಳ ಮುಖ್ಯ. ಹಾಗಾಗಿಯೇ ಈ ನೀರನ್ನು ಸಾಗಿಸುವುದನ್ನೇ ಕೆಲವರು ತಮ್ಮ ಜೀವನೋಪಾಯವನ್ನಾಗಿಸಿಕೊಂಡಿದ್ದಾರೆ. ಹಿಂದೆ ನೀರನ್ನು ಸಾಗಿಸಲು ಎತ್ತಿನ ಗಾಡಿಗಳು ಮಾತ್ರವಿದ್ದವು. ಈಗ ಟ್ಯಾಂಕರುಗಳು ಹೆಚ್ಚಿವೆ. ಗಲ್ಲಿಗಳಲ್ಲಿರುವ ರೇಷ್ಮೆ ತಯಾರಿಸುವ ಘಟಕಗಳಿಗೆ ಈಗಲೂ ಎತ್ತಿನ ಗಾಡಿಗಳ ಮೂಲಕವೇ ನೀರು ಸರಬರಾಜಾಗಬೇಕು. ಹಾಗಾಗಿ ಎತ್ತುಗಳನ್ನು ಸಾಕಿರುವ ನೀರಿನ ಗಾಡಿಗಳವರು ಈ ದಿನ ಅವನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಕರೆದೊಯ್ದರು.
‘ಸಂಕ್ರಾಂತಿಯಂದು ಕಿಚ್ಚು ಹಾಯಿಸಿದಲ್ಲಿ ಎತ್ತುಗಳಿಗೆ ರೋಗ ಬಾರದು ಎಂಬ ನಂಬಿಕೆಯಿದೆ. ನಮ್ಮ ವೃತ್ತಿಗಾಗಿ ನಾವು ಎತ್ತುಗಳನ್ನು ನಂಬಿದ್ದೇವೆ. ಎಲ್ಲಾ ಧರ್ಮಾಚರಣೆಗಳೂ ನಮ್ಮ ಒಳ್ಳೆಯದಕ್ಕೆ ಮಾಡಿದ್ದಾರೆ. ಹಾಗಾಗಿ ನಾವು ಈ ದಿನ ಎತ್ತುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತೇವೆ. ಇತರರೂ ತರುತ್ತಾರೆ ಅವರೊಂದಿಗೆ ನಾವು ಕಿಚ್ಚು ಹಾಯಿಸುತ್ತೇವೆ’ ಎಂದು ಷಫೀವುಲ್ಲಾ ತಿಳಿಸಿದರು.
- Advertisement -
- Advertisement -
- Advertisement -
- Advertisement -