ಹಳೆಯ 500 ಮತ್ತು 1,00 ರೂಗಳ ನೋಟುಗಳನ್ನು ಪಡೆಯದ ಕಾರಣ ಗ್ರಾಹಕರು ಗಲಾಟೆ ಮಾಡಿ ಪೀಠೋಪಕರಣಗಳನ್ನು ತಳ್ಳಾಡಿದ ಘಟನೆ ನಗರದ ಮುತ್ತೂಟ್ ಫೈನಾನ್ಸ್‌ನಲ್ಲಿ ಸೋಮವಾರ ನಡೆದಿದೆ.
ನಗರದ ಮುತ್ತೂಟ್ ಫೈನಾನ್ಸ್ ಮೂಲಕ ಹಲವು ಲಕ್ಷಗಳು ಹಣ ಚಿನ್ನದ ಮೇಲೆ ಸಾಲವನ್ನು ನೀಡಿದೆ. ಸೋಮವಾರ ತಮ್ಮ ಚಿನ್ನವನ್ನು ವಾಪಸ್ ಪಡೆಯಲು ಹೋದ ಗ್ರಾಹಕರು ಹಳೆಯ ನೋಟುಗಳನ್ನು ಪಡೆಯುವುದಿಲ್ಲವೆಂದೊಡನೆ ಕುಪಿತರಾಗಿದ್ದಾರೆ. ‘ನೀವು ಕೊಟ್ಟಿದ್ದ ನೋಟುಗಳನ್ನೇ ನಿಮಗೆ ತಿರುಗಿ ಕೊಡುತ್ತಿದ್ದೇವೆ. ಏಕೆ ಪಡೆಯುವುದಿಲ್ಲ’ ಎಂದು ದಬಾಯಿಸಿದರು. ಜನರ ಕೂಗಾಟ, ತಳ್ಳಾಟದಿಂದ ಮೇಜಿನ ಮೇಲಿದ್ದ ಕಾಗದ ಪತ್ರಗಳು ಮುಂತಾದವು ಚೆಲ್ಲಾಪಿಲ್ಲಿಯಾದವು.
ಸ್ಥಳಕ್ಕೆ ಆಗಮಿಸಿದ ಸಬ್‌ಇನ್ಸ್‌ಪೆಕ್ಟರ್ ಪ್ರದೀಪ್ ಪೂಜಾರಿ, ಗ್ರಾಹಕರನ್ನು ಸಮಾಧಾನಪಡಿಸಿದರು. ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕರಿಗೆ ಅವರ ಹಿರಿಯ ಅಧಿಕಾರಿಗಳೊಡನೆ ಸಮಾಲೋಚಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ತಿಳಿಸಿದರು.
ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ಮನೋಹರ್ ಮಾತನಾಡಿ, ‘ಸರ್ಕಾರದಿಂದ ಹಳೆಯ ನೋಟುಗಳನ್ನು ಹಿಂಪಡೆಯಲು ಆದೇಶಿಸುತ್ತಿದ್ದಂತೆಯೇ ನಮಗೆ ಹಳೆಯ ನೋಟುಗಳನ್ನು ಪಡೆಯದಂತೆ ಆದೇಶಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ ಗ್ರಾಹಕರು ಹಣವನ್ನು ಬ್ಯಾಂಕುಗಳಲ್ಲಿ ಜಮೆ ಮಾಡಿ ನಮಗೆ ಕ್ರಾಸ್ ಚೆಕ್ ನೀಡಬಹುದು, ಆರ್.ಟಿ.ಜಿ.ಎಸ್ ಮಾಡಬಹುದು, ವೆಬ್ ಮೂಲಕವೂ ಹಣ ನೀಡಿ ಅವರ ಒಡವೆಗಳನ್ನು ಬಿಡಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಅವರಿಗೆ ತಿಳಿ ಹೇಳುತ್ತಿದ್ದೇವೆ’ ಎಂದು ಹೇಳಿದರು.
- Advertisement -
- Advertisement -
- Advertisement -
- Advertisement -