ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಖಾತೆಗಳ ಬದಲಾವಣೆಗಾಗಿ ತಹಶೀಲ್ದಾರರು ಸೇರಿದಂತೆ ಕಚೇರಿಯ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿಗಳು ಲಂಚ ನೀಡದೇ ಖಾತೆಗಳನ್ನು ಬದಲಾವಣೆ ಮಾಡುತ್ತಿಲ್ಲ, ಎ.ಪಿ.ಎಂ.ಸಿ.ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನವರ ಜೊತೆ ಶಾಮೀಲಾಗಿ ಮತದಾರರ ಸಂಖ್ಯೆಯನ್ನು ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕ ಎಂ.ರಾಜಣ್ಣ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಬುಧವಾರ ಮುಕ್ತಾಯವಾಗಿದೆ.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿರುವ ಶಾಸಕ ಎಂ.ರಾಜಣ್ಣ ನೇತೃತ್ವದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ಕಂದಾಯ ಇಲಾಖೆಯ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಸುಭ್ರಮಣಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಅವರು ಮತದಾರರ ಪಟ್ಟಿಯಲ್ಲಿ ಜಮೀನುಗಳು ಇಲ್ಲದಿರುವವರನ್ನು ಸೇರಿಸುವ ಮೂಲಕ ಕಾಂಗ್ರೆಸ್‌ನವರ ಕೈ ಗೊಂಬೆಗಳಂತೆ ವರ್ತನೆ ಮಾಡಿದ್ದಾರೆ. ಇವರಿಗೆ ತಹಶೀಲ್ದಾರ್ ಕೆ.ಎಂ.ಮನೋರಮಾ ಸಹಕಾರ ನೀಡಿದ್ದಾರೆ. ಪಡಿತರ ಚೀಟಿಗಳನ್ನು ನೀಡಲು ೨೦೦೦ ರೂಪಾಯಿಗಳವರೆಗೂ ಲಂಚ ಪಡೆದುಕೊಂಡು ವಿತರಣೆ ಮಾಡಿದ್ದಾರೆ ಈ ಬಗ್ಗೆ ತನಿಖೆ ನಡೆಸಬೇಕು. ಒಂದೊಂದು ಖಾತೆ ಮಾಡಲು ಲಕ್ಷಾಂತರ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ಮೂರು ಜನರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ನಡೆಸುತ್ತಿದ್ದರು.
ಜಿಲ್ಲಾಧಿಕಾರಿ ಆದಿತ್ಯ ದೀಪ್ತಿ ಕಾನಡೆ ಅವರು, ರಾಜಸ್ವ ನಿರೀಕ್ಷಕ ಸುಭ್ರಮಣಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಅವರನ್ನು ಮಂಗಳವಾರ ಅಮಾನತ್ತುಗೊಳಿಸಿದ್ದರು. ಅಧಿಕಾರಿಗಳ ಅಮಾನತ್ತಿಗೆ ಸಮಾಧಾನವಾಗದ ಶಾಸಕರು ತಹಶೀಲ್ದಾರರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿ ಧರಣಿ ಮುಂದುವರೆಸಿದ್ದರಿಂದ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿತ್ತು.
ಬುಧವಾರ ಧರಣಿ ಸ್ಥಳಕ್ಕೆ ಬೇಟಿ ನೀಡಿದ್ದ ಉಪವಿಭಾಗಾಧಿಕಾರಿ ಶಿವಸ್ವಾಮಿ, ತಹಶೀಲ್ದಾರರನ್ನು ಮೂರು ದಿನಗಳ ಕಾಲ ರಜೆಯ ಮೇಲೆ ಕಳುಹಿಸಲಾಗಿದೆ. ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ಜಿಲ್ಲಾಧಿಕಾರಿಗಳು ವರದಿಯನ್ನು ತರಿಸಿಕೊಂಡು ಪರಿಶೀಲನೆ ನಡೆಸುತ್ತಾರೆ. ವರದಿಯ ಪರಿಶೀಲನೆಯ ನಂತರ ಆರೋಪ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುತ್ತಾರೆಂದು ಭರವಸೆ ನೀಡಿದ ನಂತರ ಧರಣಿ ಹಿಂಪಡೆದಿದ್ದಾರೆ.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ಮೇಲೂರು ಬಿ.ಎನ್.ರವಿಕುಮಾರ್, ಧನಂಜಯರೆಡ್ಡಿ, ಪಿ.ಶಿವಾರೆಡ್ಡಿ, ಬಿ.ಎನ್.ರಘುನಾಥ್, ಕನಕಪ್ರಸಾದ್, ಕೆ.ಎಸ್.ಮಂಜುನಾಥ್, ಎಸ್.ಎಂ.ರಮೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.