Home News ಮಾವು ಅಭಿವೃದ್ಧಿ ನಿಗಮದಿಂದ ಸಹಾಯಧನ

ಮಾವು ಅಭಿವೃದ್ಧಿ ನಿಗಮದಿಂದ ಸಹಾಯಧನ

0

ಮಾವು ಅಭಿವೃದ್ಧಿ ನಿಗಮದಿಂದ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಒಂದು ಎಕರೆಗೆ ಎರಡು ಸಾವಿರ ರೂಗಳಂತೆ ಗರಿಷ್ಠ ಹತ್ತು ಎಕರೆಗೆ ಸಹಾಯಧನ ನೀಡಲಾಗುವುದು ಎಂದು ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕ ಡಾ.ಎಸ್‌.ವಿ.ಹಿತ್ತಲಮನಿ ತಿಳಿಸಿದರು.
ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದ ಆಂಜಿನಪ್ಪನವರ ಮನೆಯ ಅವರಣದಲ್ಲಿ ಬುಧವಾರ ಚಿಂತಾಮಣಿಯ ಮಾಡಿಕೆರೆಯ ಮಾವು ಅಭಿವೃದ್ಧಿ ಕೇಂದ್ರ ಮಾವು ಬೆಳೆಗಾರರಿಗೆ ಆಯೋಜಿಸಿದ್ದ ಮಾವು ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾವಿನ ಸಾಗಾಣಿಕೆಗೆ ಬಳಸುವ ಕ್ರೇಟ್‌, ಕಾರ್ಟೂನ್‌ ಬಾಕ್ಸ್‌ ಮತ್ತು ಸೂಕ್ಷ್ಮ ಪೋಷಕಾಂಶಗಳಿಗೆ ಶೇ. 50 ರಷ್ಟು ಸಹಾಯಧನ ನೀಡುತ್ತಿದ್ದು, ಅವುಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸುತ್ತ ಮುತ್ತಲ್ಲಿನ ಗ್ರಾಮಗಳಾದ ಬೀರಪ್ಪನಹಳ್ಳಿ, ಕೊತ್ತನೂರು , ಪಲಿರ್ಚೇಲು, ವೈ. ಹುಣಸೇನಹಳ್ಳಿ ಗಳಿಂದ ಸುಮಾರು 120 ಜನ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು. ತರಬೇತಿಯಲ್ಲಿ ರೈತರಿಗೆ ಮಾವಿನಲ್ಲಿ ಸವರುವಿಕೆ, ಕಾಂಡಕೊರಕದ ಹತೋಟಿ, ಕೀಟ ಮತ್ತು ರೋಗಗಳ ಕುರಿತಂತೆ ತಿಳಿಸಿಕೊಡಲಾಯಿತು. ರೈತರ ತೋಟದಲ್ಲಿ ಪ್ರಾತ್ಯಕ್ಷತೆ ಸಹ ಏರ್ಪಡಿಸಲಾಗಿತ್ತು.
ತೋಟಗಾರಿಕೆ ಉಪ ನಿರ್ದೇಶಕಿ ಎಂ. ಗಾಯಿತ್ರಿ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಬಿ. ಆರ್. ಗೀತಾ ಮತ್ತು ರಮಾದೇವಿ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ನಿತಿನ್ ಮತ್ತು ರವಿಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.