ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ರಾತ್ರಿ ಗ್ರಾಮದ ಗುಟ್ಟಾಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ‘ಕುರು ಪಾಂಡವ ಸಂಗ್ರಾಮ – ಶ್ರೀಕೃಷ್ಣ ಸಂಧಾನ’ ಎಂಬ ಕನ್ನಡ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿತ್ತು.
ನಾಟಕದ ವಿಶೇಷವೆಂದರೆ ಎಲ್ಲಾ ಪಾತ್ರಗಳನ್ನೂ ಸ್ತ್ರೀಯರೇ ನಿರ್ವಹಿಸಿದ್ದು, ಅದರಲ್ಲೂ ಮತ್ತೂ ವಿಶೇಷವೆಂದರೆ ಒಂದೇ ಕುಟುಂಬಕ್ಕೆ ಸೇರಿದ ಹದಿನಾರು ಮಂದಿ ಸ್ತ್ರೀಯರು ನಾಟಕದಲ್ಲಿ ಪಾತ್ರವಹಿಸಿ ಅಭಿನಯಿಸಿದ್ದರು. ತೆಲುಗು ಪೌರಾಣಿಕ ನಾಟಕಗಳನ್ನಷ್ಟೇ ಆಡುತ್ತಿದ್ದ ತಾಲ್ಲೂಕಿನಲ್ಲಿ ಕನ್ನಡದ ಪೌರಾಣಿಕ ನಾಟಕ ನಡೆದದ್ದು ಕೂಡ ವಿಶೇಷವಾಗಿತ್ತು.
ಬೆಂಗಳೂರಿನ ಶ್ರೀ ಆರಾದನಾ ಪ್ರಸನ್ನ ಕೃಪಾ ಪೋಷಿತ ನಾಟಕ ಮಂಡಳಿಯ ಮಹಿಳಾ ಸದಸ್ಯರು ದುರ್ಯೋಧನ, ದುಶ್ಯಾಸನ, ಕೃಷ್ಣ, ಭೀಮ, ಶಕುನಿ, ವಿಧುರ, ಭೀಷ್ಮ, ಅರ್ಜುನ, ದ್ರೋಣ, ಕರ್ಣನ ಪಾತ್ರಗಳನ್ನು ನಿರ್ವಹಿಸಿ ಯಾವುದೇ ಪುರುಷ ಪಾತ್ರಧಾರಿಗೂ ಕಡಿಮೆಯಿರದಂತೆ ಲೀಲಾಜಾಲವಾಗಿ ಅಭಿನಯಿಸಿದರು. ವೀರ, ಕ್ರೌರ್ಯ, ಭೀಭತ್ಸ, ಕೋಪ, ಶಾಂತ, ಹಾಸ್ಯ ಮುಂತಾದ ಪೌರುಷರಸಗಳನ್ನು ಅಭಿನಯದಲ್ಲಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು. ಹೆಣ್ಣು ಪಾತ್ರಗಳಂತೂ ತಮಗೆ ತಾವೇ ಸಾಟಿಯೆಂಬಂತೆ ಉತ್ತರೆ, ದ್ರೌಪದಿ, ಕುಂತಿ ಮೊದಲಾದ ಪಾತ್ರಗಳಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.
ತಾಲ್ಲೂಕಿನಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ನಾಟಕ ವೀಕ್ಷಿಸಿದರು. ರಾತ್ರಿ 9 ಗಂಟೆಗೆ ಪ್ರಾರಂಭವಾದ ನಾಟಕ ಬೆಳಗಿನ ಜಾವದವರೆಗೂ ನಡೆದರೂ ಜನರು ಕುಳಿತು ನೋಡಿದರು. ಆಗಾಗ ಚಪ್ಪಾಳೆ, ಶಿಳ್ಳೆಗಳ ಮೂಲಕ ಮೆಚ್ಚುಗೆ ಮತ್ತು ಪ್ರೋತ್ಸಾಹ ವ್ಯಕ್ತಪಡಿಸಿದರು.
‘ನಮ್ಮ ಕುಟುಂಬದವರೆಲ್ಲರೂ ತಮ್ಮನ್ನು ರಂಗಭೂಮಿಗೆ ಸಮರ್ಪಿಸಿಕೊಂಡಿದ್ದಾರೆ. ಪ್ರತಿಯೊಬ್ಬರು ಒಂದಲ್ಲ ಒಂದು ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತರು. ನಾಟಕದ ನಿರ್ದೇಶನ, ವಾದ್ಯವೃಂದ, ಪ್ರಸಾದನ, ಅಭಿನಯ ಎಲ್ಲದರಲ್ಲೂ ತೊಡಗಿಸಿಕೊಳ್ಳುತ್ತೇವೆ. ಗಂಡಸರೆಲ್ಲ ವಾದ್ಯ, ಸಂಗೀತ, ನಿರ್ದೇಶನ ಮುಂತಾದ ತೆರೆ ಮರೆಯ ಕೆಲಸಗಳನ್ನು ನಡೆಸುತ್ತಾ ಮಹಿಳೆಯರನ್ನು ಪ್ರೋತ್ಸಾಹಿಸುವ ಕಾರಣ ಮಹಿಳೆಯರೇ ಅಭಿನಯಿಸುವ ನಾಟಕ ತಂಡವನ್ನು ಕಟ್ಟಿಕೊಂಡು ರಾಜ್ಯದ ವಿವಿದೆಡೆ ಪ್ರವಾಸ ಕೈಗೊಂಡಿದ್ದೇವೆ. ಎಲ್ಲರೂ ಸಂಬಂಧಿಗಳೇ ಆಗಿದ್ದು, ಕೌಟುಂಬಿಕ ನಾಟಕ ತಂಡವಾಗಿದ್ದೇವೆ. ಪೌರಾಣಿಕ ನಾಟಕವನ್ನು ಗ್ರಾಮದಲ್ಲಿ ಆಡಿಸಿದಾಗ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ನಾವು ನಾಟಕವಾಡಿದ ಮರುದಿನ ಮಳೆ ಬಂದ ನಿರ್ದರ್ಶನಗಳೂ ಇದ್ದು ನಾವೂ ಅವರ ನಂಬಿಕೆಗೆ ಬೆರಗಾಗಿದ್ದೇವೆ’ ಎನ್ನುತ್ತಾರೆ ದುರ್ಯೋಧನ ಪಾತ್ರಧಾರಿ ವರಲಕ್ಷ್ಮೀ.
- Advertisement -
- Advertisement -
- Advertisement -
- Advertisement -