ಮಹಿಳೆಯರು ಹಾಗು ಶಾಲಾಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ವಿರೋಧಿಸಿ ನಡೆದ ಬಂದ್‌ಗೆ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಗಡಿ, ಮುಗ್ಗಟ್ಟು, ಹೋಟೆಲ್‌ಗಳು ಮುಚ್ಚಿದ್ದು ಜನ ಜೀವನ ಅಸ್ತವ್ಯಸ್ಥವಾಗಿತ್ತು.
ಅಂಗಡಿ, ಹೋಟೆಲ್, ಶಾಲಾ ಕಾಲೇಜುಗಳು, ಸಿನೆಮಾ ಮಂದಿರ, ಪೆಟ್ರೋಲ್ ಬಂಕ್‌ಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಮುಚ್ಚಿದ್ದವು.
ಬಸ್ ಸಂಚಾರವಿಲ್ಲದೆ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಪಟ್ಟಣದ ಪ್ರಮುಖ ಬೀದಿಗಳಾದ ಪ್ರವಾಸಿ ಮಂದಿರ ರಸ್ತೆ, ಅಶೋಕ ರಸ್ತೆ ಸೇರಿದಂತೆ ಇನ್ನಿತರೆ ಜನನಿಬಿಡ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಪ್ರಸಿದ್ಧ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾತ್ರ ಹರಾಜು ಪ್ರಕ್ರಿಯೆ ಸೇರಿದಂತೆ ವಿವಿಧ ಚಟುವಟಿಕೆಗಳು ಸುಗಮವಾಗಿ ನಡೆದವು.
ಮಾರುಕಟ್ಟೆಗೆ ಎಂದಿನಂತೆ ೧,೧೦೦ ಲಾಟುಗಳಷ್ಟು ರೇಷ್ಮೆಗೂಡು ಆಗಮಿಸಿದ್ದು ಸಮಯಕ್ಕೆ ಸರಿಯಾಗಿ ಹರಾಜು, ತೂಕ ಹಾಕುವುದು, ರೈತರಿಗೆ ಹಣ ಸಂದಾಯ ಸೇರಿದಂತೆ ಮಾರುಕಟ್ಟೆಯಲ್ಲಿ ದಿನವೂ ನಡೆಯುವ ಎಲ್ಲಾ ಪ್ರಕ್ರಿಯೆಗಳು ಗುರುವಾರ ಸುಗಮವಾಗಿ ನಡೆದವು.
ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು. ಆ ನಂತರ ಪಟ್ಟಣದ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದ ಪ್ರತಿಭಟನಾಕಾರರು ರಾಜ್ಯದಾದ್ಯಂತ ಮಹಿಳೆಯರ ಹಾಗು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು ಸದನದಲ್ಲಿ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗು ಅತ್ಯಾಚಾರಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
- Advertisement -
- Advertisement -
- Advertisement -
- Advertisement -