ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಧಿಸಬೇಕು. ಇರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೇಂದ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ, ಕೋಚಿಮುಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಹಂಡಿಗನಾಳ ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ನಡೆದ ಸರ್ಕಾರಿ ಸೌಲಭ್ಯಗಳ ಅರಿವು ಶಿಬಿರ ಹಾಗೂ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳಿಂದ ಗ್ರಾಮಸ್ಥರಿಗೆ ಮುಖ್ಯವಾಗಿ ಮಹಿಳೆಯರಿಗೆ ಸಿಗುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳನ್ನು ವಿವರಿಸಲೆಂದು ಗ್ರಾಮಕ್ಕೆ ಅಧಿಕಾರಿಗಳು ಬಂದಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಮುಂದೆ ಬಂದು ಸ್ವಾವಲಂಬಿ ಜೀವನ ನಡೆಸಿದಾಗ ಮಾತ್ರ ಸಂಸಾರದಲ್ಲಿ ಸುಖ ಜೀವನ ನಡೆಸಲು ಸಾಧ್ಯ. ಅದು ಗ್ರಾಮದ ಅಭಿವೃದ್ಧಿ ಕೂಡ. ಸ್ತ್ರೀಶಕ್ತಿ ಸಂಘಗಳ ಬಗ್ಗೆ ಬ್ಯಾಂಕ್ ಸೇರಿದಂತೆ ಎಲ್ಲಾ ಸಂಸ್ಥೆಗಳಲ್ಲೂ ಉತ್ತಮ ಅಭಿಪ್ರಾಯವಿದೆ. ಶಿಸ್ತು ಸಂಸ್ಕಾರ ನೈತಿಕತೆಯನ್ನು ಹೊಂದಿರುವುದು ಮಹಿಳಾ ಸಂಘಗಳ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.
ಕೆ.ರಾ.ಶಿ ಮಂಡಳಿ ಎಚ್.ಎಂ.ಶಿವಬೋರಯ್ಯ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಮಾಂಜಿ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ವಿವರಿಸಿದರು.
ಜಾನಪದ ಸಂಶೋಧಕ ಡಾ.ಕೆ. ರವಿಕುಮಾರ್ ಸ್ತ್ರೀಯರ ಸಬಲೀಕರಣ ಕುರಿತ ಗೀತೆಗಳನ್ನು ಹಾಡಿದರು. ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಭಜನೆ ಗೀತೆಗಳನ್ನು ಆಯೋಜಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯವನ್ನು ತಿಳಿಸುವ ನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಅಪ್ಪೇಗೌಡನಹಳ್ಳಿ ಮಹಿಳೆಯರು ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಮಾಂಜಿ ಅವರಿಗೆ ಮನವಿಯನ್ನು ಸಲ್ಲಿಸಿ ಈ ಹಿಂದೆ ಗ್ರಾಮದ ವಿದ್ಯಾರ್ಥಿಗಳು, ಮಹಿಳಾ ಸಂಘಗಳು ಮೇಲೂರಿನ ಕೆನರಾಬ್ಯಾಂಕಿನಲ್ಲಿ ವಹಿವಾಟನ್ನು ನಡೆಸುತ್ತಿದ್ದು, ಅದನ್ನು ಇನ್ನು ಮುಂದೆ ಶಿಡ್ಲಘಟ್ಟದ ಎಸ್.ಬಿ.ಎಂ ಬ್ಯಾಂಕಿನಲ್ಲಿ ನಡೆಸಬೇಕೆನ್ನುತ್ತಿದ್ದಾರೆ. ಈ ತೊಂದರೆಯನ್ನು ಸರಿಪಡಿಸಬೇಕು ಎಂದು ಕೋರಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ನರಸಿಂಹಯ್ಯ, ಸಿ.ಬಿ.ಆರ್.ಎಸ್.ಇ.ಟಿ.ಐ ನಿರ್ದೇಶಕ ಡಿ.ನಾರಾಯಣಸ್ವಾಮಿ, ಕೆ.ಎಂ.ಎಫ್ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ಹಂಡಿಗನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಮ್, ಎ.ಎಂ.ತ್ಯಾಗರಾಜ್, ಉಮಾ ಚನ್ನೇಗೌಡ, ನೇತ್ರಾವತಿ ಸಂಪತ್, ಎಂ.ಪಿ.ಸಿ.ಎಸ್ ಅಧರ್ಯಕ್ಷ ರವಿಪ್ರಕಾಶ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಮುಖ್ಯ ಶಿಕ್ಷಕಿ ಬಿ.ಎಂ.ವೆಂಕಟರತ್ನಮ್ಮ, ಎಂ.ಪಿ.ಸಿ.ಎಸ್ ಕಾರ್ಯದರ್ಶಿ ಎನ್.ಗೋವಿಂದರಾಜು, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಮ್ಮ, ನಳಿನಾಕ್ಷಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -