ಮಹಿಳೆಯರು ವಿವಿಧ ರಂಗಗಳಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಎಲ್ಲಾ ರಂಗಗಳಲ್ಲಿ ಸ್ವಾವಲಂಬನೆ ಸಾಧಿಸಿಕೊಂಡು ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆದಿದ್ದಾರೆ. ಮಹಿಳೆಯರಿಗೆ ರಕ್ಷಣೆ ಸಿಗುವಂತಹ ಸಮಾಜ ನಮ್ಮದಾಗಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಯೋಜ ಮಾಡಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಮಹಿಳೆಯರು ಬದುಕುತ್ತಿದ್ದಾರೆ. ಆದರೆ ನಿತ್ಯ ಹೆಣ್ಣಿನ ಮೇಲೆ ನಡೆಯುತ್ತಿರುವ ಆತ್ಯಾಚಾರ, ದೌರ್ಜನ್ಯ, ಭ್ರೂಣಹತ್ಯೆ, ವೇಶ್ಯಾವಾಟಿಕೆ, ಆಸಿಡ್ ದಾಳಿ, ವರದಕ್ಷಿಣೆ ಕಿರುಕುಳ, ಹಿಂಸೆಗಳು ಕಣ್ಮುಂದೆ ನಡೆಯುತ್ತಿರುವಂತಹ ಸಂದರ್ಭದಲ್ಲಿ ಕೇವಲ ಒಂದು ದಿನ ಮಾತ್ರ ಮಹಿಳಾ ದಿನಾಚರಣೆ ಆಚರಣೆ ಮಾಡಿದರೆ ಅರ್ಥವಿರುವುದಿಲ್ಲ. ಪುರುಷರು ಕೂಡಾ ಸಮಾಜದಲ್ಲಿ ಮಹಿಳೆಯ ಪಾತ್ರವೇನು ಅವರ ಮಹತ್ವವೇನು ಎಂಬುದರ ಬಗ್ಗೆ ಅರ್ಥಮಾಡಿಕೊಂಡರೆ ಮಾತ್ರ ಸಮಾಜದಲ್ಲಿನ ಎಲ್ಲಾ ರಂಗಗಳಲ್ಲೂ ಉತ್ತಮ ಅಭಿವೃದ್ಧಿಯ ಜೊತೆಯಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು ಮಾತನಾಡಿ, ಹೆಣ್ಣು ಎಂದರೆ ಕೆಲವರು ದೃಷ್ಟಿಯಲ್ಲಿ ಆಸ್ತಿ, ಸರಕು, ಮತ್ತೆ ಕೆಲವರ ದೃಷ್ಟಿಯಲ್ಲಿ ಹೆಣ್ಣೆಂದರೆ ಹಿಂಸೆ, ಅನ್ಯಾಯ ಅನುಭವಿಸಲೆಂದೇ ಹುಟ್ಟಿರುವ ಜೀವ. ಸತ್ಯ ಇವೆರಡರ ನಡುವೆ ಎಲ್ಲೋ ಇದೆ. ಹೆಣ್ಣು ಮಕ್ಕಳು ಇವೆರಡನ್ನೂ ಅನುಭವಿಸುವ ಕಹಿ ವಾಸ್ತವಗಳಾಗಿದ್ದಾರೆ. ಲಿಂಗ ತಾರತಮ್ಯ ರೂಢಿಸಿಕೊಂಡ ಸಮಾಜವು ಹೆಣ್ಣು-ಗಂಡು ಎಂಬ ಕಲ್ಪಿತ ಚೌಕಟ್ಟಿನೊಳಗೆ ಮನುಷ್ಯರನ್ನು ಬಂಧಿಸಿಟ್ಟು ಅವಾಂತರಗಳನ್ನು ಸೃಷ್ಠಿಮಾಡಲಾಗುತ್ತಿದ್ದು ವ್ಯವಸ್ಥೆ ಬದಲಾಗಬೇಕು.
ಪ್ರತಿಯೊಂದು ಕುಟುಂಬಕ್ಕೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳುವತ್ತ ಜನರಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಜಾಗೃತಿ ಮೂಡಿಸುವುದರಿಂದ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಬಹುದಾಗಿದೆ. ಹೆಣ್ಣು ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಮಾಜದಲ್ಲಿ ಉನ್ನತಸ್ಥಾನ ಅಲಂಕರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ಮಾತನಾಡಿ, ೨೧ ನೇಯ ಶತಮಾನದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ, ಎರಡನ್ನೂ ನಿಭಾಯಿಸಬೇಕಾಗಿದೆ. ಮಹಿಳೆಯರು ಇದೀಗ ಕಷ್ಟವಿದ್ದರೂ ಅಸಹಾಯಕರಾಗಿ ಅಂಜುಬುರಕರಾಗಿರದೆ ದಿಟ್ಟತನದಿಂದ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಬಗೆಹರಿಸಿಕೊಳ್ಳುವ ಶಕ್ತಿಯನ್ನು ಹೊಂದಿಕೊಂಡಿದ್ದೇವೆ.
ಸಮಾಜದಲ್ಲಿನ ಬಹುತೇಕ ಹುದ್ದೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ರಾರಾಜಿಸುತ್ತಿದ್ದಾರೆ. ಇಂದು ಮಹಿಳೆಯರು ಉತ್ತಮ ಶಿಕ್ಷಣ ಪಡೆಯುತ್ತಿರುವುದು ಕೂಡಾ ಮುಂದುವರೆಯುತ್ತಿರುವುದರ ಸಂಕೇತವಾಗಿದ್ದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಮತ್ತು ರಾಜಕೀಯವಾಗಿ ಮುಂದುವರೆದು ಸಮಾಜವನ್ನು ಪರಿವರ್ತನೆಯ ಕಡೆಗೆ ಕೊಂಡೊಯ್ಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ಸೌಂಧರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ದಿ ಸಂಸ್ಥೆಯ ಡಾ.ವಿಜಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ, ರಾಜಶೇಖರ್, ಶೋಭಾ ಶಶಿಕುಮಾರ್, ಚಂದ್ರಕಲಾ ಬೈರೇಗೌಡ, ದೀಪಾ ರಾಂಬಾಬು ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -