ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಶುಕ್ರವಾರ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ಪೂಜಾ ಕಾರ್ಯಕ್ರಮ ಕಾಕಡ ಆರತಿ, ಸಾಯಿ ಹೋಮ, ಸತ್ಯನಾರಾಯಣಸ್ವಾಮಿ ಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇವಾಲಯಕ್ಕೆ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ತಾಲ್ಲೂಕು ಹಾಗೂ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಭಕ್ತರಿಗಾಗಿ ತೀರ್ಥ ಪ್ರಸಾದ ಹಾಗೂ ಪಾನಕ ಸೇವೆಯನ್ನು ಆಯೋಜಿಸಲಾಗಿತ್ತು. ದೇವಾಲಯವನ್ನು ಹಾಗೂ ದೇವರನ್ನು ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
‘ಗುರುಪೌರ್ಣಿಮೆಯ ಕಾರ್ಯಕ್ರಮದ ಸಂದರ್ಭದಲ್ಲಿ ಶಿರಡಿಯಿಂದ ಸುಮಾರು ೧೦ ಅಡಿ ಎತ್ತರದ ಸುಂದರವಾದ ಬಾಬಾ ಪ್ರಸಾದ ಸಿದ್ದಪಡಿಸುತ್ತಿರುವ ಬೃಹತ್ ವಿಗ್ರಹವನ್ನು ತರಿಸಲಾಗಿದೆ. ಇದು ಶಿರಡಿಯಲ್ಲಿ ಪ್ರಸಾದಾಲಾಯ ಮುಂಭಾಗದಲ್ಲಿರುವ ವಿಗ್ರಹದ ಯಥಾವತ್ ಪ್ರತಿರೂಪವಾಗಿದೆ. ಸುಮಾರು ೧೦ ಲಕ್ಷ ರೂಗಳ ವೆಚ್ಚದಲ್ಲಿ ಶುಕ್ರವಾರ ಗುರುಪೌರ್ಣಿಮೆಯ ದಿನದಿಂದ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ನಮ್ಮ ರೈತರ ಕಷ್ಟವನ್ನು ದೂರ ಮಾಡಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುವಂತೆ ಹಾಗೂ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಆಯೋಜಿಸಲಾಗಿದೆ’ ಎಂದು ದೇವಾಲಯದ ಸಂಚಾಲಕ ಎಂ ನಾರಾಯಣಸ್ವಾಮಿ ತಿಳಿಸಿದರು.
- Advertisement -
- Advertisement -
- Advertisement -
- Advertisement -