ತಾಲ್ಲೂಕಿನ ಮಳ್ಳೂರು ಮತ್ತು ಎಚ್.ಕ್ರಾಸ್ ದೇವಾಲಯಗಳಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.
ಮಳ್ಳೂರಿನ ಕರಗದಮ್ಮ ದೇವಿ ದೇವಾಲಯದ ಬಾಗಿಲನ್ನು ಮುರಿದು ದೇವಿಯ ಕಿರೀಟ, ಆಭರಣಗಳು ಮತ್ತು ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ. ಸುಮಾರು ಒಂದೂವರೆ ಲಕ್ಷ ರೂಗಳ ದೇವಿಯ ಕಿರೀಟ, ಆಭರಣಗಳು ಹಾಗೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಹಣವನ್ನು ಹುಂಡಿಯಿಂದ ದೋಚಿ ಹುಂಡಿಯನ್ನು ಕೆರೆಯ ಅಂಗಳದಲ್ಲಿ ಬಿಸಾಡಿದ್ದು ಕಂಡು ಬಂದಿದೆ.
ಕರಗದಮ್ಮ ದೇವಿ ದೇವಾಲಯ ಪುರಾತನವಾಗಿದ್ದು ಕಳೆದ ವರ್ಷವಷ್ಟೇ ಪುನರುಜ್ಜೀವನಗೊಳಿಸಲಾಗಿತ್ತು. ದೇವಾಲಯದ ಸುತ್ತ ಮನೆಗಳಿದ್ದರೂ ಸಹ ಕಳ್ಳತನವಾಗಿರುವುದು ಸೋಜಿಗವಾಗಿದೆ ಮತ್ತು ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ. ಕಳ್ಳರು ಹತ್ತಿರದ ಮನೆಗಳಿಗೆ ಹೊರಗಿನಿಂದ ಚಿಲಕ ಹಾಕಿದ್ದರು ಎನ್ನಲಾಗಿದೆ. ದೇವಾಲಯ ಸಮಿತಿಯವರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳವನ್ನೂ ಕರೆಸಲಾಗಿತ್ತು.
ತಾಲ್ಲೂಕಿನ ಎಚ್.ಕ್ರಾಸ್‌ನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣವನ್ನು ದೋಚಲಾಗಿದೆ. ದೇವಾಲಯದ ಹಿಂಬಾಗದ ಆವರಣದಲ್ಲಿಯೇ ಪೊಲೀಸ್ ಠಾಣೆಯಿದ್ದು, ಮುಂದೆ ಹಾಗೂ ಪಕ್ಕ ಹೆದ್ದಾರಿಯಿದೆ. ಆದರೂ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.