Home News ಮಳೆ ನೀರನ್ನು ಬಳಸಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಸಲು ಯೋಜನೆ

ಮಳೆ ನೀರನ್ನು ಬಳಸಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಸಲು ಯೋಜನೆ

0

ತಾಲ್ಲೂಕಿನಲ್ಲಿ ಸುಮಾರು 5,935 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೇಸಾಯವನ್ನು ಕೈಗೊಂಡಿದ್ದು, ಸುಮಾರು 6,039 ಕುಟುಂಬಗಳು ಹಿಪ್ಪುನೇರಳೆ ಬೇಸಾಯವನ್ನು ಅವಲಂಬಿಸಿದ್ದಾರೆ. ರೇಷ್ಮೆ ಗೂಡಿನ ಬೆಲೆ ಹೆಚ್ಚಳದಿಂದಾಗಿ ಇನ್ನಷ್ಟು ರೈತರು ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿತರಾಗುತ್ತಿದ್ದಾರೆ.
ಪ್ರತಿದಿನ ಸರಾಸರಿ 40 ಟನ್ ಗೂಡು ಆವಕವಾಗುತ್ತಿದ್ದ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಈಗ 28 ಟನ್ ಗೂಡಿನ ಆವಕವಾಗುತ್ತಿದೆ. ಕಳೆದ ವರ್ಷಕ್ಕಿಂತ ಶೇಕಡಾ 10 ರಷ್ಟು ಕುಂಠಿತವಾಗಲು ಕಾರಣ ಉಷ್ಣಾಂಶ ಏರಿಕೆ ಹಾಗೂ ನೀರಿನ ಅಭಾವವಾಗಿದೆ. ಈಗ ಮಳೆ ಬೀಳುತ್ತಿರುವುದರಿಂದ ಇನ್ನು 15 ದಿನಗಳೊಳಗೆ ರೇಷ್ಮೆ ಗೂಡಿನ ಉತ್ಪಾದನೆ ಹೆಚ್ಚಲಿದೆ.
ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿಸಲು ರೇಷ್ಮೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ನರೇಗಾದಲ್ಲಿ ಹೊಸ ಪದ್ಧತಿಯಾದ ಇಂಡೋ ಜಪಾನೀಸ್ ವಿಧಾನವಾದ ಜೋಡಿ ಸಾಲು ಪದ್ಧತಿಯಲ್ಲಿ ಹಿಪ್ಪುನೇರಳೆ ನಾಟಿ ಮಾಡಲು 221 ಮಾನವ ದಿನಗಳ ಕೂಲಿವೆಚ್ಚ ಮತ್ತು ಸಾಮಗ್ರಿ ವೆಚ್ಚ ಕೊಡಲಾಗುತ್ತಿದೆ ಎನ್ನುತ್ತಾರೆ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ.
ಮಳೆಯಾಶ್ರಯದಲ್ಲಿ ಮರಗಳ ರೂಪದಲ್ಲಿ ಹಿಪ್ಪುನೇರಳೆ ಗಿಡಗಳನ್ನು ಬೆಳೆಸಲು ರೇಷ್ಮೆ ಇಲಾಖೆಯಿಂದ ಯೋಜನೆಯನ್ನು ರೂಪಿಸಿದೆ. 300 ಎಕರೆಯಲ್ಲಿ ನಾಟಿ ಮಾಡಲು ವರದನಾಯಕನಹಳ್ಳಿ ಗೇಟ್ ಬಳಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಒಂದು ಲಕ್ಷ ಮೂವತ್ತೈದು ಸಾವಿರ ಹಿಪ್ಪುನೇರಳೆ ಸಸಿಗಳನ್ನು ಬೆಳೆಸಿಕೊಡುತ್ತಿದ್ದಾರೆ. ಮುಂದಿನ ತಿಂಗಳಿನಲ್ಲಿ ಅವುಗಳನ್ನು ಇಲಾಖೆಯಿಂದ ವಿತರಿಸಲಾಗುತ್ತದೆ. 10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ನಾಟಿ ಮಾಡಬಹುದಾಗಿದೆ. ಇದಕ್ಕೂ ನರೇಗಾದಿಂದ 161 ಮಾನವ ದಿನಗಳ ಕೂಲಿಯನ್ನೂ ನೀಡಲಾಗುವುದು ಎಂದು ಅವರು ತಿಳಿಸಿದರು.
ಹಿಪ್ಪುನೇರಳೆ ನರ್ಸರಿ ಮಾಡಲು ಹಾಗೂ 2 ಮತ್ತು 3ನೇ ವರ್ಷದ ಹಿಪ್ಪುನೇರಳೆ ತೋಟ ನಿರ್ವಹಣೆಗೂ ಸರ್ಕಾರ ಸಹಾಯಹಸ್ತ ಚಾಚಿದೆ. ಇದರ ಸದುಪಯೋಗ ಮಾಡಿಕೊಳ್ಳುವ ಮೂಲಕ ಮಳೆ ನೀರಿನಲ್ಲೂ ಮುಂದಿನ ದಿನಗಳಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಬಹುದಾಗಿದೆ ಎಂದರು.