ಗ್ರಾಮೀಣ ಭಾಗದಲ್ಲಿ ರಕ್ತದಾನದ ಕುರಿತಂತೆ ಜಾಗೃತಿ ಮೂಡಿದೆ. ನಮ್ಮಲ್ಲಿ ನೀರಿನ ಕೊರತೆಯಿರಬಹುದು ಆದರೆ ರಕ್ತದಾನಿಗಳ ಕೊರತೆಯಿಲ್ಲ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಗ್ರಾಮ ಪಂಚಾಯತಿ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಬ್ಯಾಟರಾಯಸ್ವಾಮಿ ಸಮುದಾಯ ಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ರಕ್ತದಾನಿಗಳು ನೀಡುವ ರಕ್ತ ಜಿಲ್ಲೆಯಲ್ಲಿನ ರೋಗಿಗಳಿಗೇ ಬಳಕೆಯಾಗುತ್ತದೆ. ಹೆಚ್ಚಾದಲ್ಲಿ ಮಾತ್ರ ಬೇರೆಡೆಗೆ ಕಳುಹಿಸಲಾಗುತ್ತದೆ. ಯುವಕರು ಹೆಚ್ಚಾಗಿ ರಕ್ತದಾನಿಗಳಾಗಬೇಕು. ರೆಡ್ ಕ್ರಾಸ್ ಸೊಸೈಟಿಯ ಸದಸ್ಯರಾಗಬೇಕು. ಪ್ರಾಣವನ್ನು ಉಳಿಸುವ ಈ ಮಹಾ ಕಾರ್ಯದಲ್ಲಿ ಭಾಗಗಳಾಗಬೇಕು ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಸರ್ಕಾರಿ ಐ.ಟಿ.ಐ ಕಾಲೇಜಿನ 35 ಮಂದಿ ವಿದ್ಯಾರ್ಥಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಒಟ್ಟಾರೆ 120 ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ರೆಡ್ ಕ್ರಾಸ್ ಸೊಸೈಟಿಯ ತಾಲ್ಲೂಕು ಕಾರ್ಯದರ್ಶಿ ಗುರುರಾಜರಾವ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಡಾ.ಉಷಾ, ಡಾ.ರವಿ, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯಾ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಗಿಶ್ ಕಲ್ಯಾಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಾಂಜಿನಪ್ಪ, ಬ್ಯಾಟರಾಯಶೆಟ್ಟಿ, ಲಕ್ಷ್ಮಯ್ಯ, ಭಕ್ತರಹಳ್ಳಿ ಭೈರೇಗೌಡ, ರಮೇಶ್, ರವಿಕುಮಾರ್, ಕೃಷ್ಣಯ್ಯ, ರಾಜಶೇಖರ್, ಚಂದ್ರಶೇಖರ್, ಶ್ರೀಧರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.