Home News ಮತ ಖಾತರಿ ಪಡಿಸಿಕೊಳ್ಳುವ ಸಾಧನ ವಿವಿಪಿಎಟಿ ಬಳಕೆಯ ಕುರಿತು ಅರಿವು ಕಾರ್ಯಾಗಾರ

ಮತ ಖಾತರಿ ಪಡಿಸಿಕೊಳ್ಳುವ ಸಾಧನ ವಿವಿಪಿಎಟಿ ಬಳಕೆಯ ಕುರಿತು ಅರಿವು ಕಾರ್ಯಾಗಾರ

0

ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಮೇ 12 ರಂದು ನಡೆಯುವ ಮತದಾನದಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ ಮತ್ತು ಈ ಚುನಾವಣೆಯಲ್ಲಿ ವಿಶೇಷವಾಗಿ ಬಳಸುತ್ತಿರುವ ಮತದಾನ ಖಾತ್ರಿ ಪಡಿಸುವ ವಿವಿಪಿಎಟಿ(ವೆರಿಫೈಯೆಬಲ್‌ ಪೇಪರ್‌ ಆಡಿಟ್‌ ಟ್ರಯಲ್‌) ರ ಬಳಕೆ ಮತ್ತು ಮತದಾನದ ಮಹತ್ವದ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ವಿವಿಪಿಎಟಿ ತರಬೇತಿ ತಂಡದ ಮುಖ್ಯಸ್ಥ ಸಿ.ಎಸ್‌.ಶ್ರೀನಾಥಗೌಡ ಮಾತನಾಡಿದರು.
ಮತ ಖಾತರಿ ಪಡಿಸಿಕೊಳ್ಳಲು ಮತದಾರನಿಗೆ ಅವಕಾಶ ಕಲ್ಪಿಸಲಾಗಿರುವ ನೂತನ ವಿವಿಪಿಎಟಿ ಬಳಕೆಯ ಬಗ್ಗೆ ಸಾರ್ವಜನಿಕರು, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಹಮ್ಮಿಕೊಳ್ಳಲಾಗಿದೆ. ಈ ದಿನ ಮೊದಲ ಹಂತವಾಗಿ ಹಂಡಿಗನಾಳ, ಮೇಲೂರು, ಚೀಮಂಗಲ ಪಂಚಾಯಿತಿಗಳಲ್ಲಿ ಮಾಹಿತಿ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ.
ಸದೃಢ ಪ್ರಜಾಪ್ರಭುತ್ವಕ್ಕಾಗಿ ಎಲ್ಲಾ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಿಗೆ ನೀಡಿರುವ ಅಧಿಕಾರವನ್ನು ಬಳಸಬೇಕು. ಈ ಚುನಾವಣೆಯಲ್ಲಿ ಹೊಸದಾಗಿ ಬಳಕೆ ಮಾಡುತ್ತಿರುವ ವಿವಿಪಿಎಟಿ(ವೆರಿಫೈಯೆಬಲ್‌ ಪೇಪರ್‌ ಆಡಿಟ್‌ ಟ್ರಯಲ್‌)ರ ಮೂಲಕ ಮತ ಚಲಾಯಿಸಿದ ನಂತರ ಈ ಯಂತ್ರದ ಮೂಲಕ ಮತದಾರ ತಾನು ಯಾರಿಗೆ ಮತದಾನ ಮಾಡಿದ್ದೇನೆ ಎಂಬುದರ ಬಗ್ಗೆ ಏಳು ಸೆಕೆಂಡ್‌ಗಳ ಕಾಲ ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಇದರ ಕುರಿತು ಎಲ್ಲಾ ಜನಪ್ರತಿನಿಧಿಗಳು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಪಿಎಟಿ ತರಬೇತಿ ತಂಡದ ರಾಜು, ಶಾಂತಮ್ಮ, ಕುಮಾರ್‌, ಪಿಡಿಒ ಬಿ.ಇ.ಅಂಜನ್‌ಕುಮಾರ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ.ಜಯರಾಮ್‌, ಎ.ಎಂ.ತ್ಯಾಗರಾಜ್‌, ಉಮಾ, ಅಶ್ವತ್ಥಮ್ಮ, ಮುನಿಯಪ್ಪ, ಬೈರೇಗೌಡ, ಚಂದ್ರು, ಮುನೇಗೌಡ, ಶ್ರೀನಿವಾಸ್‌, ನಾರಾಯಣಸ್ವಾಮಿ ಹಾಜರಿದ್ದರು.