ಶಾಲೆಯ ಮಕ್ಕಳ ಬರವಣಿಗೆಯು ಶಾಲೆಗೆ ದಾನಿಗಳನ್ನು ಕರೆತಂದ ಘಟನೆ ತಾಲ್ಲೂಕಿನ ಕನ್ನಮಂಗಲದಲ್ಲಿ ನಡೆದಿದೆ.
ತಾಲ್ಲೂಕಿನ ಕನ್ನಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕತೆ, ಕವನ, ನಾಟಕ, ಅನುಭವ, ಚಿತ್ರ ಮುಂತಾದ ಬರವಣಿಗೆಯನ್ನು ಪ್ರತೀ ವರ್ಷ ಅವರ ಶಿಕ್ಷಕರು ‘ಶಾಮಂತಿ’ ಎಂಬ ಪುಸ್ತಕವನ್ನು ಹೊರತರುತ್ತಾರೆ. ಈ ಪುಸ್ತಕಕ್ಕೆ ರಾಜ್ಯಮಟ್ಟದ ಪ್ರಶಸ್ತಿಯೂ ಲಭಿಸಿದೆ.
ಶಾಲೆಯ ಶಾಮಂತಿ ಪುಸ್ತಕ ಓದಿ ಪ್ರೇರಣೆಗೊಂಡು ಈ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿ ಬೆಂಗಳೂರಿನ ಶಿಶುತಜ್ಞ ವೈದ್ಯರಾದ ಡಾ. ಇಲಾನಾ ಕಾರ್ಯಪ್ಪ ಸ್ವಯಂಪ್ರೇರಣೆಯಿಂದ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಅವರು ೧೩,೦೦೦ ರೂ. ಮೌಲ್ಯದ ಪ್ರಿಂಟರ್ ಅನ್ನು ಶಾಲೆಗೆ ಕೊಡುಗೆಯಾಗಿ ಬುಧವಾರ ನೀಡಿದರು. ಇದಲ್ಲದೇ ಶಾಲೆಯ ಮಕ್ಕಳಿಗೆ ಪುಸ್ತಕಗಳು, ಕರಕುಶಲ ಕಲೆಯ ಸಾಮಾಗ್ರಿಗಳನ್ನು ನೀಡಿದರು.
ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಮಕ್ಕಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಬಾಲ್ಯ, ಕೊಡಗಿನ ಜೀವನ ಶೈಲಿ, ವಿದ್ಯಾಭ್ಯಾಸ, ಪ್ರವಾಸ, ಹವ್ಯಾಸ ಹಾಗೂ ವಿದೇಶಗಳ ಅನುಭವಗಳ ಕುರಿತು ಮಕ್ಕಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಇದಲ್ಲದೇ ಮಕ್ಕಳನ್ನು ವಿವಿಧ ಪ್ರಶ್ನೆಗಳನ್ನು ಕೇಳಿ ಟಿ.ವಿ. ಹಾಗೂ ಮೊಬೈಲ್ ಫೋನ್ಗಳಿಂದ ಆದಷ್ಟು ದೂರವಿದ್ದು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿ ಡಿ.ಕೆ.ಕಿರಣ್ ಮಾತನಾಡಿ, ನಾವು ಶಾಮಂತಿ ಪುಸ್ತಕ ಮಾಡಲು ಪ್ರಿಂಟರ್ ಕೊರತೆ ಇತ್ತು ಇನ್ನು ಸುಲಭವಾಗಿ ನಾವು ವಿವಿಧ ಪುಸ್ತಕಗಳನ್ನು ಮಾಡುತ್ತೇವೆ ಎಂದು ಅನಿಸಿಕೆ ವ್ಯಕ್ತಪಡಿಸಿದನು.
ಈ ಸಂದರ್ಭದಲ್ಲಿ ಗ್ರಾಮದ ಸ್ನೇಹ ಯುವಕರ ಸಂಘದ ಅಧ್ಯಕ್ಷರಾದ ಕೆ.ವಿ. ವಸಂತ ವಲ್ಲಭ ಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ ಎಚ್. ಮುನಿಯಪ್ಪ, ಶಿಕ್ಷಕರಾದ ಕೆ. ಶಿವಶಂಕರ್, ಜೆ. ಶ್ರೀನಿವಾಸ್, ಎಸ್. ಕಲಾಧರ್ ಹಾಗೂ ಎನ್. ಪದ್ಮಾವತಿ ಹಾಜರಿದ್ದರು.