ಮಕ್ಕಳಲ್ಲಿ ಅಡಗಿರುವ ಸೂಪ್ತವಾದ ಕಲೆ ಹೊರಹಾಕಲು ಪ್ರತಿಭಾ ಕಾರಂಜಿ ಒಂದು ಅತ್ಯತ್ತಮ ವೇದಿಕೆಯಾಗಿದೆ. ಈ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದವರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮಕ್ಕಳ ಪ್ರತಿಭೆ ಗುರುತಿಸಿ ನಿಷ್ಪಕ್ಷ ಪಾತವಾಗಿ ನಿರ್ಣಯ ನೀಡಬೇಕು ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಶಾಲೆಯಲ್ಲಿ ಮಂಗಳವಾರ ನಡೆದ ನಗರ ವ್ಯಾಪ್ತಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸುತ್ತಿರುತ್ತವೆ. ಶಿಕ್ಷಕರು ಕಾಲಕಾಲಕ್ಕೆ ತಮ್ಮ ಶಾಲೆಯ ಮಕ್ಕಳನ್ನು ಅಂಥ ಸ್ಪರ್ಧೆಗಳಿಗೆ ಕಳುಹಿಸಿಕೊಡಬೇಕು. ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳು ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ಕೊಳ್ಳುವಂತೆ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು ಎಂದು ಸಲಹೆ ನೀಡಿದರು.
ಸ್ಪರ್ಧೆಯಲ್ಲಿ ಸೋತ ಅಥವಾ ಬಹುಮಾನ ಪಡೆದುಕೊಳ್ಳದ ವಿದ್ಯಾರ್ಥಿಗಳು ನಿರಾಶರಾಗದೆ ಮುಂದಿನ ಸ್ಪರ್ಧೆಗೆ ತಯಾರಿ ನಡೆಸಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವುಗಳು ಸಹಜವಾಗಿದ್ದು, ಸೋಲನ್ನು ಮುಂದಿನ ಸ್ಪರ್ಧೆಯ ಮೆಟ್ಟಿಲೆಂದು ಭಾವಿಸಬೇಕು ಅಂದಾಗ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ. ತಾಲ್ಲೂಕು ಮಟ್ಟದಲ್ಲಿ ಗೆದ್ದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಬೇಕು ಎಂದು ಹುರಿದುಂಬಿಸಿದರು.
ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿಗೆ ಆಗಮಿಸಿದ್ದ ನಗರ ವ್ಯಾಪ್ತಿಯ 22 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ತಾಲ್ಲೂಕು ಕಸಾಪ ವತಿಯಿಂದ ಕನ್ನಡ ರತ್ನಕೋಶ ಮತ್ತು ಇತರೆ ಪುಸ್ತಕಗಳನ್ನು ‘ಪುಸ್ತಕ ಕೊಡುಗೆ’ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ನೀಡಿದರು. ಪ್ರತಿಭಾ ಕಾರಂಜಿಯಲ್ಲಿ ಆಯ್ದ ಒಂದು ಸ್ಪರ್ಧೆಯಲ್ಲಿ ವಿಜೇತರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಗರಸಭೆ ಸದಸ್ಯ ಇಲಿಯಾಜ್ ಬೇಗ್, ಖದೀರ್, ಆರೀಫ್, ಮುನಿಯಪ್ಪ, ಸುಂದರಾಚಾರಿ, ಚಂದ್ರಶೇಖರ್, ಸಾದಿಕ್ಪಾಷ, ಮಳ್ಳೂರಯ್ಯ, ಪಾಪಣ್ಣ, ತಿಮ್ಮಯ್ಯ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಶಾಲಾ ಸಿಬ್ಬಂದಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಭಕ್ತರಹಳ್ಳಿ: ತಾಲ್ಲೂಕಿನ ಭಕ್ತರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಭಕ್ತರಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ಪ್ರತಿಭಾ ಕಾರಂಜಿಯನ್ನು ಆಯೋಜಿಸಲಾಗಿತ್ತು. ನಾಗಮಂಗಲ, ಕಾಕಚೊಕ್ಕಂಡಹಳ್ಳಿ, ನಡಿಪಿನಾಯಕನಹಳ್ಳಿ, ತೊಟ್ಲಗಾನಹಳ್ಳಿ ಮೊದಲಾದ ಗ್ರಾಮಗಳ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮೇಲೂರು: ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲೂರು ಕ್ಲಸ್ಟರ್ ಮಟ್ಟದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯನ್ನು ಮಂಗಳವಾರ ನಡೆಸಲಾಯಿತು. ಮೇಲೂರು, ಚೌಡಸಂದ್ರ, ಮಳ್ಳೂರು, ಮುತ್ತೂರು, ಅಪ್ಪೇಗೌಡನಹಳ್ಳಿ ಮೊದಲಾದ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.