ಬಲಿಷ್ಠ ಹಾಗು ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಇಂದಿನ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಅಗತ್ಯ ಇದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಹೇಳಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿಯಿರುವ ಮಾರ್ತೊಮ ಕ್ಯಾಂಪ್ ಸೆಂಟರ್ನಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ಶುಕ್ರವಾರ ತಾಲ್ಲೂಕಿನಿಂದ ಹೊರಟ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರಗಳಲ್ಲಿ ನಡೆಯುವ ಬೇಸಿಗೆ ಶಿಬಿರಗಳಲ್ಲಿ ಶ್ರೀಮಂತರ ಮಕ್ಕಳು ಸಾವಿರಾರು ರೂಗಳು ಹಣ ನೀಡಿ ಶಿಬಿರದಲ್ಲಿ ಭಾಗವಹಿಸುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅದರ ಉಪಯೋಗ ಸಿಗುವುದಿಲ್ಲ ಹಾಗಾಗಿ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ಉಚಿತ ಬೇಸಿಗ ಶಿಬಿರ ಆಯೋಜಿಸಲಾಗಿದ್ದು ತಾಲ್ಲೂಕಿನಿಂದ ಒಟ್ಟು ೧೧೦ ಮಂದಿ ಮಕ್ಕಳು ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಊಟ, ವಸತಿ ಸೇರಿದಂತೆ ಶಿಬಿರ ನಡೆಯುವ ಸ್ಥಳ ತಲುಪಲು ವಾಹನ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿದೆ ಎಂದ ಅವರು ಶಿಬಿರದಲ್ಲಿ ಮಕ್ಕಳಿಗೆ ನುರಿತ ತಜ್ಞ ತರಬೇತುದಾರರಿಂದ ಸಾಹಸ, ಕ್ರೀಡಾ ಚಟುವಟಿಕೆ, ನಾಯಕತ್ವ ಗುಣ, ಗುರಿಮುಟ್ಟುವ ಮನೋಭಾವ, ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳುವುದು, ಸೇರಿದಂತೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ಎ.ನಾಗರಾಜ್, ಕಸಾಪ ತಾಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಅಧ್ಯಕ್ಷ ವಿ.ಕೃಷ್ಣ, ಕ್ರೀಡಾಪಟು ಮುನಿರಾಜು, ವೇಣು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -