ವಿದ್ಯಾರ್ಥಿಗಳಲ್ಲಿ ಭಾಷೆ ಬಗ್ಗೆ ಪ್ರೀತಿ ಹಾಗೂ ಜ್ಞಾನ ಬೆಳೆಯಲು ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡದಲ್ಲಿ ಸಮೃದ್ಧವಾದ ಸಾಹಿತ್ಯವಿದ್ದು ಎಷ್ಟು ಓದಿದರೂ ಮುಗಿಯದ ಅಕ್ಷಯಪಾತ್ರೆಯಂತಿದೆ ಎಂದು ಕಸಾಪ ಜಿಲ್ಲಾ ನಿಕಟಪೂರ್ವ ಗೌರವ ಕಾರ್ಯದರ್ಶಿ ಅಮೃತಕುಮಾರ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ವಿವೇಕಾನಂದ ಪಿಯು ಕಾಲೇಜು ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕುವುದೇ ಸಾಧನೆಯಾಗಬಾರದು, ನಮ್ಮ ಸಾಧನೆಗಳ ಮೂಲಕ ಸಮಾಜವು ನೆನಪಿನಲ್ಲಿ ಉಳಿಸಿಕೊಳ್ಳುವಂತಹ ಬದುಕು ನಮ್ಮದಾಗಬೇಕು. ನಮ್ಮ ನಾಡಿನಲ್ಲಿ ಅನೇಕ ಮಂದಿ ಸಾಧಕರಿದ್ದು, ಅವರು ಪ್ರೇರಣೆಯಾಗಬೇಕು. ಪಠ್ಯದೊಂದಿಗೆ ಆಸಕ್ತಿಕರವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪುಸ್ತಕವು ಆಪ್ತ ಸ್ನೇಹಿತನಂತೆ. ಓದುತ್ತಾ ಹೋದಂತೆ ನಾವು ಎಷ್ಟೊಂದು ಓದಿಲ್ಲ ಎಂಬುದು ಅರಿವಾಗುತ್ತಾ ಹೋಗುತ್ತದೆ. ನಿಮ್ಮ ಗ್ರಂಥಾಲಯದಲ್ಲಿನ ಪುಸ್ತಕಗಳ ಓದುವಿಕೆ ಬಹು ಮುಖ್ಯ ಎಂದು ಹೇಳಿದರು.
ಉಪನ್ಯಾಸಕ ಚಂದ್ರಶೇಖರ್ ಮಾತನಾಡಿ, ಭಾಷೆ, ಕನ್ನಡ ಸಾಹಿತ್ಯ, ವಿದ್ಯಾಭ್ಯಾಸ ಕ್ರಮ, ವಚನಕಾರರು, ಸಾಹಿತಿಗಳ ಕುರಿತಂತೆ ವಿವರಿಸಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಹನ್ನೆರಡು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಎನ್.ಪುನೀತ್ಕುಮಾರ್, ದ್ವಿತೀಯ ಸ್ಥಾನ ಪಡೆದ ಎ.ಪ್ರಿಯಾಂಕ ಮತ್ತು ತೃತೀಯ ಸ್ಥಾನ ಪಡೆದ ಬಿ.ಇಂದುಶ್ರೀ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಕಸಾಪ ವತಿಯಿಂದ ಪ್ರಶಂಸಾ ಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್, ಸಾಹಿತಿ ಗೋಪಾಲಗೌಡ ಕಲ್ವಮಂಜರಿ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ದೇವರಾಜ್, ಕಸಾಪ ತಾಲ್ಲೂಕು ಘಟಕದ ಸಂಚಾಲಕರಾದ ಮೇಲೂರು ಸುದರ್ಶನ್, ಸುಧೀರ್, ಸದಸ್ಯ ಗುರುನಂಜಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.