Home News ಭವಿಷ್ಯದ ಬಗ್ಗೆ ನಿರ್ದಿಷ್ಠ ಕಲ್ಪನೆ, ಗುರಿ, ಯೋಜನೆ ಹೊಂದಿರಬೇಕು

ಭವಿಷ್ಯದ ಬಗ್ಗೆ ನಿರ್ದಿಷ್ಠ ಕಲ್ಪನೆ, ಗುರಿ, ಯೋಜನೆ ಹೊಂದಿರಬೇಕು

0

ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಜೊತೆಯಲ್ಲಿಯೇ ಮುಂದಿನ ಭವಿಷ್ಯದ ಬಗ್ಗೆ ನಿರ್ದಿಷ್ಠ ಕಲ್ಪನೆ, ಗುರಿ, ಯೋಜನೆಯನ್ನು ಹೊಂದಿರಬೇಕು. ಅದರ ಬಗ್ಗೆ ಅವರು ನಿರಂತರವಾಗಿ ಪರಿಶ್ರಮ ಹಾಕುತ್ತಿರಬೇಕು ಎಂದು ವೈಟ್ ಫೀಲ್ಡ್ನ ಡಿ.ಸಿ.ಪಿ ಎಂ.ನಾರಾಯಣ್ ಹೇಳಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ೨೦೧೬-–೧೭ ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆದು ಪದವೀಧರನಾಗುವುದರೊಂದಿಗೆ ಪೋಷಕರಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ದೇಶದ ಉತ್ತಮ ಪ್ರಜೆಯಾಗಿ ರೂಪಗೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಾಜದ ಹಾಗು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಚಿಂತನೆ ನಡೆಸುವಂತವರಾಗಬೇಕು ಎಂದರು.
ಶಿಕ್ಷಣ ಎಂಬುವುದು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆಯಾದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದ ಮಾದರಿ ವ್ಯಕ್ತಿಯಾಗಿ ರೂಪುಗೊಂಡು ದೇಶದ ಬೆನ್ನೆಲುಬಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ನಾಗರಿಕತೆ ಹಾಗು ಮನರಂಜನೆಯ ಹೆಸರಿನಲ್ಲಿ ತಪ್ಪು ದಾರಿ ಹಿಡಿಯಬಾರದು. ಸಭ್ಯ ನಾಗರೀಕ ಸಮಾಜವನ್ನು ನಿರ್ಮಿಸುವುದೇ ಶಿಕ್ಷಣದ ಗುರಿಯಾಗಿದ್ದು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಜವಾಬ್ದಾರಿ ಹಾಗು ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಹಾಗು ಸಾಂಸ್ಕೃತಿಕ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಾನಾಯಕ್, ಖ್ಯಾತ ಗಾಯಕ ಅಕ್ಬರ್, ಉಪನ್ಯಾಸಕರಾದ ರಾಮಚಂದ್ರಪ್ಪ, ಡಾ.ವೆಂಕಟೇಶ್, ಉಮೇಶ್ರೆಡ್ಡಿ, ರಮೇಶ್, ರೋಶನ್, ವೆಂಕಟರೋಣಪ್ಪ, ವನಜಾ, ಸಂತೋಷ್ ಹಾಜರಿದ್ದರು.