ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗಂಟಲು, ಸ್ತನ ಹಾಗೂ ಸರ್ವಿಕಲ್ ಕ್ಯಾನ್ಸರ್ಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್, ಬೆಂಗಳೂರು ರೋಟರಿ ಹೈಗ್ರೌಂಡ್ಸ್ ಸಹಯೋಗದಲ್ಲಿ ಭಾನುವಾರ ಬಿ.ಎಂ.ವಿ ಪ್ರೌಢಶಾಲಾ ಆವರಣದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ತನಗಳಲ್ಲಿ ಹಾಗೂ ಇತರೆಡೆಗಳಲ್ಲಿ ಕಾಣಿಸಿಕೊಳ್ಳುವ ಗಡ್ಡೆ, ಗುಣವಾಗದ ಕೆಮ್ಮು ಅಥವಾ ಗೊಗ್ಗರು ದನಿ, ಸ್ತ್ರೀಯರಲ್ಲಿ ಅಸಾಮಾನ್ಯವಾದ ರಕ್ತ ಹಾಗೂ ಇತರ ಸ್ರಾವಗಳು, ಎದೆಯಲ್ಲಿ ಅಡಚಣೆ, ಅಜೀರ್ಣ, ದೇಹದ ತೂಕ ಕಡಿಮೆಯಾಗುವುದು, ನರಹುರಿ, ಮುಂತಾದವು ಕ್ಯಾನ್ಸರ್ ರೋಗದ ಆರಂಭಿಕ ಲಕ್ಷಣಗಳಾಗಿದ್ದು, ಪ್ರಾರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಕಾಯಿಲೆ ಗುಣಪಡಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಈ ಭಯಾನಕ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಈ ಶಿಬಿರದ ಉದ್ದೇಶವಾಗಿದೆ. ಕ್ಯಾನ್ಸರ್ ತಪಾಸಣೆಯ ಜೊತೆಗೆ ಕಣ್ಣಿನ ತಪಾಸಣೆ ಹಾಗೂ ಶಾಲಾ ಮಕ್ಕಳಿಗೆ ದಂತ ತಪಾಸಣೆ ಮಾಡಲಾಗುವುದು. ಕಣ್ಣಿನ ಶಸ್ತ್ರಚಿಕಿತ್ಸೆಗೂ ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಶಿಬಿರದಲ್ಲಿ ರಾಜೀವ್ ಗಾಂಧಿ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ತಜ್ಞ ವೈದ್ಯರಿಂದ ಬಿ.ಎಂ.ವಿ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ನಡೆಸಲಾಯಿತು.
ಶಾಸಕ ಎಂ.ರಾಜಣ್ಣ, ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ವಿ.ಮುನೇಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ಚನ್ನೇಗೌಡ, ಎಸ್.ನಾರಾಯಣಸ್ವಾಮಿ, ಅಶ್ವತ್ಥಪ್ಪ, ಎಂ.ವೆಂಕಟಮೂರ್ತಿ, ಪುಟ್ಟಮೂರ್ತಿ, ಬಿ.ಕೆ.ರಾಮಚಂದ್ರ, ನಂಜುಡಾರಾಧ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.