ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಭಕ್ತರ ಸಮ್ಮುಖದಲ್ಲಿ ಸಾಂಗೋಪವಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ನಗರದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ರಥೋತ್ಸವಕ್ಕೆ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.
‘ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ಈ ದೇವಾಲಯದಲ್ಲಿ ಪ್ರಸಾದ ಕೇಳುವುದು ರೂಢಿ. ಮನೆಗೆ ಹೆಣ್ಣು ತರಲು, ಹೆಣ್ಣು ಕೊಡಲು, ಬಾವಿ ತೋಡಲು, ಕೊಳವೆ ಬಾವಿ ಕೊರೆಸಲು, ಭೂಮಿ ಕೊಳ್ಳಲು, ಮನೆ ಕಟ್ಟಲು ಮುಂತಾದ ಶುಭ ಕಾರ್ಯಗಳಿಗೆ ಬ್ಯಾಟರಾಯಸ್ವಾಮಿಯ ಪ್ರಸಾದ ಕೇಳುತ್ತಾರೆ’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು.
ಚಿಕ್ಕದಾಸರಹಳ್ಳಿ, ಮಳಮಾಚನಹಳ್ಳಿ, ದೊಡ್ಡದಾಸರಹಳ್ಳಿ, ಮುಗಿಲಡಪಿ, ಜಪ್ತಿಹೊಸಹಳ್ಳಿ, ನಾರಾಯಣದಾಸರಹಳ್ಳಿ, ಬೋದಗೂರು ಮೊದಲಾದ ಗ್ರಾಮಸ್ಥರು ಪಾನಕ ವಿತರಿಸಿದರು. ಮಳಮಾಚನಹಳ್ಳಿ ಗ್ರಾಮಸ್ಥರು ಆಗಮಿಸಿರುವ ಮುತ್ತೈದೆಯರಿಗೆ ಬಳೆ ವಿತರಿಸಿದರು.
ವಿಜಯನಗರ ಕಾಲದ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡದ ಮೇಲಿರುವುದರಿಂದ ಕಂಗೊಳಿಸುತ್ತಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.