ತಾಲ್ಲೂಕಿನ ಮಳಮಾಚನಹಳ್ಳಿ, ಮುಗಿಲಡಿಪಿ ಮತ್ತು ಚಿಕ್ಕದಾಸರಹಳ್ಳಿ ಗ್ರಾಮಗಳ ಗಡಿಯಲ್ಲಿರುವ ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟದಲ್ಲಿ ಸೋಮವಾರ ದೇವಾಲಯ ನಿರ್ಮಾಣದ 48ನೇ ದಿನದ ಹೋಮ ಮತ್ತು ದೀಪೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ದೇವರ ಮೂರ್ತಿ, ಪಾದಗಳ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಿ ಭಕ್ತರೆಲ್ಲಾ ಸೇರಿ ಗುಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಿದ್ದು, 48 ದಿನಗಳಿಂದ ಪೂಜಾವಿಧಿಯನ್ನು ಆಚರಿಸುತ್ತಾ ಸೋಮವಾರ ಹೋಮವನ್ನು ನಡೆಸಿ ಮಹಿಳೆಯರು ದೀಪಗಳನ್ನು ಹೊತ್ತು ತಂದು ಪೂಜೆ ಸಲ್ಲಿಸಿದರು.
ಮಾಗಡಿಯಿಂದ ಮಳಮಾಚನಹಳ್ಳಿ ಗ್ರಾಮಕ್ಕೆ ಬ್ಯಾಟರಾಯಸ್ವಾಮಿ ಬಂದಿದ್ದರು. ಕೆಲ ಕಾಲ ಅಲ್ಲಿ ನೆಲೆಸಿದ್ದವರು, ಅಲ್ಲಿಂದ ತನ್ನ ಪಾದವನ್ನು ಈ ಗುಟ್ಟದ ಮೇಲೆ ಇಟ್ಟರಂತೆ. ಇಲ್ಲಿಂದ ಇನ್ನೊಂದು ಪಾದವನ್ನು ಚಿಕ್ಕದಾಸರಹಳ್ಳಿ ಬಳಿಯ ಗುಟ್ಟದ ಮೇಲಿಟ್ಟು ಅಲ್ಲಿಯೇ ನೆಲೆಸಿದರೆಂಬುದು ಅತ್ಯಂತ ಹಿಂದಿನ ಕಥೆ. ಹೀಗೆ ಪಾದವನ್ನಿಟ್ಟ ಗುರುತಿರುವ ಈ ಗುಟ್ಟವು ಬ್ಯಾಟರಾಯಸ್ವಾಮಿ ಪಾದಗಳ ಗುಟ್ಟವೆಂದೇ ಹೆಸರಾಗಿದೆ. ಇಲ್ಲಿ ಪ್ರತಿ ವರ್ಷವೂ ಪೂಜೆಯನ್ನು ನಡೆಸಲಾಗುತ್ತಿತ್ತು. ಈಚೆಗೆ ಭಕ್ತರೆಲ್ಲಾ ಸೇರಿ ದೇವರನ್ನು ಪ್ರತಿಷ್ಠಾಪಿಸಿ ಪುಟ್ಟ ಗುಡಿಯನ್ನು ಕಟ್ಟಿದ್ದಾರೆ. ಈ ಗುಟ್ಟದಿಂದ ನೋಡಿದಾಗ ಈಗ ಬ್ಯಾಟರಾಯಸ್ವಾಮಿ ನೆಲೆಸಿರುವರೆಂದು ನಂಬಿರುವ ತಾಲ್ಲೂಕಿನ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯವು ಕಣ್ಣಿಗೆ ಗೋಚರಿಸುತ್ತದೆ.
ಮಳಮಾಚನಹಳ್ಳಿ, ಮುಗಿಲಡಿಪಿ ಮತ್ತು ಚಿಕ್ಕದಾಸರಹಳ್ಳಿ ಗ್ರಾಮಗಳ ಮಹಿಳೆಯರು ದೀಪೋತ್ಸವ ನಡೆಸಿದರೆ, ಉಳಿದ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸುಬ್ಬಾಚಾರಿ, ಜಿ.ಕೆ.ವೆಂಕಟೇಶ್, ಮುನಿರಾಜು, ದೇವರಾಜ್, ನಾಗರಾಜ್, ಮೋಹನ್, ಅರ್ಚಕ ರಂಗಪ್ಪ, ರಾಜಣ್ಣ, ರಮೇಶ್, ಗೋಪಾಲ್,ರತ್ನಮ್ಮ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -