ಇತಿಹಾಸ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ೫೦ ಲಕ್ಷ ರೂ ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿಯಿರುವ ಬ್ಯಾಟರಾಯಸ್ವಾಮಿ ದೇವಾಲಯದ ಬಳಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ಯಾತ್ರಿನಿವಾಸ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಸಾವಿರ ವರ್ಷಗಳ ಇತಿಹಾಸವಿದ್ದು, ಯಾತ್ರಿನಿವಾಸ ಕಾಮಗಾರಿಯಲ್ಲಿ ಭಕ್ತಾದಿಗಳು ಉಳಿದುಕೊಳ್ಳಲು ಎಂಟು ಕೊಠಡಿ ಸೇರಿದಂತೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಈಗಾಗಲೇ ತಾಲೂಕಿನ ತಲಕಾಯಲಬೆಟ್ಟಕ್ಕೆ ೧ ಕೋಟಿ, ಹಾಗು ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮಲಿಂಗೇಶ್ವರನ ಬೆಟ್ಟಕ್ಕೆ ೧.೫ ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬ್ಯಾಟರಾಯಸ್ವಾಮಿ ದೇವಾಲಯದವರು ಮತ್ತೊಂದು ಪ್ರಸ್ತಾವನೆ ಸಲ್ಲಿಸಿದಲ್ಲಿ ದೇವಾಲಯದ ಬಳಿ ಸಭೆ ಸಮಾರಂಭಗಳನ್ನು ಮಾಡಲು ಒಂದು ಬೃಹತ್ ಕೊಠಡಿ ನಿರ್ಮಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ಸಹಕಾರಿ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಗ್ರಾಮದ ಮುಖಂಡರಾದ ಮುನಿರಾಜು, ದಾಮೋದರ್, ಮಂಜುನಾಥ, ವಕೀಲ ಎಂ.ಬಿ.ಲೋಕೇಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -