ಕಲಿಯುಗದಲ್ಲಿ ಪರಮಾತ್ಮನ ನಾಮಸ್ಮರಣೆಯ ಜಪವು ಶ್ರೇಷ್ಠವಾದುದು. ಜಪವನ್ನು ಮಾಡುವುದು ನಮ್ಮ ನಮ್ಮ ಮನಸ್ಸಿನ ಉದ್ಧಾರಕ್ಕಾಗಿ ಮತ್ತು ಮಾನಸಿಕ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳುವುದಕ್ಕಾಗಿ ಜಪವನ್ನು ಮಾಡಬೇಕಾಗಿದೆ. ಜಪಯಜ್ಞವೆಂದರೆ ಅದು ಭಕ್ತರಿಗೆ ರಕ್ಷಾ ಕವಚವಿದ್ದಂತೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ನಡೆದ ವಿಶಿಷ್ಟಾದ್ವೈತ ಸಿದ್ದಾಂತದ ಪ್ರತಿಪಾದಕ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವದ ಅಂಗವಾಗಿ ಆಚರಿಸಲಾದ ಅಷ್ಟಾಕ್ಷರೀ ಜಪಯಜ್ಞದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಮಾಡುವ ಕರ್ಮವನ್ನು ಗುರುಗಳಿಗೆ ಅರ್ಪಿಸಬೇಕು. ನಿಷ್ಕಾಮ ಕರ್ಮವನ್ನು ಮಾಡಬೇಕು. ಸ್ವಾರ್ಥದಿಂದ ಏನನ್ನು ಸಾಧಿಸಲು ಆಗುವುದಿಲ್ಲ. ಪ್ರಾಪಂಚದಲ್ಲಿ ಅಂಟು ಅಂಟದ ಹಾಗೆ ಇರಬೇಕು. ಮನಸ್ಸನ್ನು ಧರ್ಮದ ಕಡೆಗೆ ತಿರುಗಿಸಬೇಕು. ಇದನ್ನು ಅಭ್ಯಾಸ ಮಾಡಲು ಧಾರ್ಮಿಕ ಆಚರಣೆಗಳಿಂದ ಸಾಧ್ಯ. ಸಾವಿರ ವರ್ಷಗಳ ಹಿಂದೆ ಜನಿಸಿದ ಶ್ರೀರಾಮಾನುಜಾಚಾರ್ಯರು ಧಾರ್ಮಿಕ ಕ್ರಾಂತಿಯನ್ನು ಮಾಡಿದ ಮಹಾಪುರುಷರು. ಶ್ರೀ ರಾಮಾನುಜರು ಧರ್ಮಕ್ಕೆ ವಿಶಿಷ್ಟಾದ್ವೈತದ ಸುಧಾರಿತ ರೂಪ ನೀಡಿ ಎಲ್ಲರಿಗೂ ಭಗವದಾರಾಧನೆಯ ಸುಲಭ ಮಾರ್ಗ ತೋರಿಸಿಕೊಟ್ಟರು. ಅದನ್ನು ಭಕ್ತಿ ಮಾರ್ಗವೆಂದರು. ಭಕ್ತಿಮಾರ್ಗವೆಂದರೆ ಭಗವಂತನಿಗೆ ಸಂಪೂರ್ಣ ಶರಣಾಗತಿ ಎಂದರು.
ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ದಾಂತವನ್ನು ಪ್ರಚುರಪಡಿಸಿ ಸರ್ವರನ್ನೂ ತಮ್ಮೊಂದಿಗೆ ಕರೆದೊಯ್ದಂತೆ ಶ್ರೀ ಯೋಗಿ ನಾರೇಯಣರು ಜಾತಿ, ಮತ, ಕುಲ, ವರ್ಣಗಳ ಭೇದವೆಣಿಸದೆ ಎಲ್ಲರನ್ನೂ ತಮ್ಮೊಂದಿಗೆ ಮೋಕ್ಷ ಮಾರ್ಗದಲ್ಲಿ ಕರೆದೊಯ್ದರು. ಶ್ರೀ ಯೋಗಿನಾರೇಯಣ ತಾತಯ್ಯನವರು ವಿಶಿಷ್ಟಾದ್ವೈತ ಸಿದ್ದಾಂತವನ್ನು ಪಾಲಿಸಿದವರು. ಇವರ ಕೀರ್ತನೆಗಳಲ್ಲಿ ಶ್ರೀರಾಮಾನುಜರನ್ನು ಹಾಡಿ ಕೊಂಡಾಡಿದ್ದಾರೆ. ಆದ್ದರಿಂದ ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಿ ಭಕ್ತಿ, ತತ್ವಗಳನ್ನು ಎಲ್ಲೆಡೆ ಪಸರಿಸಬೇಕೆಂದು ಶ್ರೀ ಯೋಗಿ ನಾರೇಯಣ ಮಠವು ನಿರ್ಣಯ ಕೈಗೊಂಡು ಮುಂದಿನ ಒಂದು ವರ್ಷಗಳ ಕಾಲ ಈ ಕಾರ್ಯಕ್ರಮಗಳು ಅವಿರತವಾಗಿ ನಡೆಯಲಿದೆ ಎಂದರು.
ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ಪ್ರಾರ್ಥನೆಯೊಂದಿಗೆ ಪ್ರಸ್ತಾವಿಕ ನುಡಿಗಳನ್ನು ನುಡಿದರು. ದೇವಾಲಯದ ಧರ್ಮದರ್ಶಿ ಬ್ಯಾಟರಾಯಶೆಟ್ಟಿರವರು ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮೊದಲು ದೇವಾಲಯದಲ್ಲಿ ಅರ್ಚಕ ವೃಂದ ವಿಶೇಷ ಪೂಜೆಗಳನ್ನು ಸಲ್ಲಿಸಿದರು.
ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಯರಮರೆಡ್ಡಿಹಳ್ಳಿ ವೆಂಕಟರಮಣಪ್ಪ, ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬೈರೇಗೌಡ, ಆನೂರು ಗ್ರಾಮಪಂಚಾಯತಿ ಉಪಾಧ್ಯಕ್ಷರಾದ ವೆಂಕಟೇಶ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಬೆಳ್ಳೂಟಿ ಸತ್ಯಪ್ಪ, ಶಿಡ್ಲಘಟ್ಟ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಳೇ ರಘು, ಹನುಮಂತರಾಯಪ್ಪ, ನಾಮದೇವರು, ಶ್ರೀ ಯೋಗಿನಾರೇಯಣ ಮಠದ ಸದಸ್ಯರುಗಳು ಮುಂತಾದವರು ಹಾಜರಿದ್ದರು.