ಬೇಸಿಗೆ ರಜೆಯಲ್ಲೂ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ ರಿಂಗಣಿಸುತ್ತಿದೆ. ಹಾಗೆಂದು ಇಲ್ಲೇನೂ ಬೇಸಿಗೆ ಶಿಬಿರವನ್ನು ಏರ್ಪಡಿಸಿಲ್ಲ. ಮಕ್ಕಳೇ ಸ್ವಯಂಪ್ರೇರಿತರಾಗಿ ಶಾಲೆಯ ಆವರಣದೊಳಕ್ಕೆ ಬರುತ್ತಾರೆ.
ಕೇರಂ, ಅಳಗುಳಿಮನೆ, ಕ್ರಿಕೆಟ್, ಮರಕೋತಿಯಾಟ, ಗಿಲ್ಲಿದಾಂಡ್ಲು, ಕುಂಟೆಬಿಲ್ಲೆ, ಶಟಲ್ ಕಾಕ್ ಮುಂತಾದ ಆಟಗಳನ್ನು ಮನಸೋ ಇಚ್ಛೆ ಆಡುತ್ತಾರೆ. ಶಾಲೆಯ ಆವರಣದಲ್ಲಿ ಕೆಂಪಾದ ಹೂವರಳಿಸಿಕೊಂಡು ಗುಲ್‌ಮೊಹರ್‌ನ ಸಾಲು ಮರಗಳು ಮಕ್ಕಳ ಮರಕೋತಿ ಆಟಕ್ಕೆ ಮತ್ತು ಉಯ್ಯಾಲೆ ಜೀಕಲಿಕ್ಕೆ ಬಳಕೆಯಾಗುತ್ತಿವೆ. ಕೆಂಪು ಹೂಗಳ ಕೆಳಗೆ ನಲಿವ ಮಕ್ಕಳ ಆಟವನ್ನು ನೋಡುವುದೇ ಒಂದು ಆನಂದ.
ಮಧ್ಯಾನ್ಹವಾಗುತ್ತಿದ್ದಂತೆ ಶಿಕ್ಷಕರು ಪೀಪಿ ಊದುತ್ತಿದ್ದಂತೆಯೇ ಸಾಲಾಗಿ ಬಂದು ಕೈಕಾಲು ಹಾಗೂ ತಮ್ಮ ತಟ್ಟೆ ಲೋಟಗಳನ್ನು ತೊಳೆದುಕೊಂಡು ಬಿಸಿಬಿಸಿ ಮುದ್ದೆಯನ್ನು ಅನ್ನ ಸಾರನ್ನು ಸೇವಿಸುತ್ತಾರೆ. ಯಾವುದಾದರೂ ಮಗುವಿನ ಹುಟ್ಟಿದ ದಿನವಿದ್ದಲ್ಲಿ ಆವತ್ತು ಮಕ್ಕಳಿಗೆಲ್ಲಾ ಪಾಯಸದ ಔತಣ.
ಆಟದ ನಡುವೆ ಶಿಕ್ಷಕರು ಮಕ್ಕಳಿಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ತರಗತಿಗಳನ್ನೂ ನಡೆಸುತ್ತಿದ್ದಾರೆ. ಕಂಪ್ಯೂಟರಿನಲ್ಲಿ ಬೆರಳಚ್ಚು ಮತ್ತು ಚಿತ್ರ ಬಿಡಿಸುವುದರಲ್ಲಿ ಮಕ್ಕಳು ಈಗಾಗಲೇ ಪಳಗಿದ್ದಾರೆ. ಶಿಕ್ಷಣ ಇಲಾಖೆಯ ವಿವಿಧ ಸಿಡಿಗಳನ್ನು ಮತ್ತು ಉತ್ತಮ ಶೈಕ್ಷಣಿಕ ಸಂಬಂಧಿ ಸಾಕ್ಷ್ಯಚಿತ್ರಗಳನ್ನೂ ತೋರಿಸುತ್ತಾರೆ. ಮಕ್ಕಳು ಕಂಪ್ಯೂಟರನ್ನು ತಾವೇ ಬಳಸುವಷ್ಟು ಶಕ್ತರಾಗಿದ್ದಾರೆ. ಇಂಗ್ಲಿಷ್ ಕಲಿಕೆ ಕೂಡ ನಡೆಸಲಾಗುತ್ತಿದೆ.
‘ನಮ್ಮ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕೆಂದು ಪೋಷಕರೊಬ್ಬರು ಒಮ್ಮೆ ಸಲಹೆ ನೀಡಿದರು. ಅದೇ ವಿಷಯವನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗ್ರಾಮಸ್ಥರ ಮುಂದೆ ಪ್ರಸ್ತಾಪಿಸಿದೆವು. ತಕ್ಷಣವೇ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದವರು ದೇಣಿಗೆ ನೀಡುವ ಮೂಲಕ ಶಾಲೆಗೆ ಕಂಪ್ಯೂಟರನ್ನು ತಂದೆವು. ರಜೆ ಸಮಯದಲ್ಲಿ ಈಗದರ ಬಳಕೆ ಹೆಚ್ಚಾಗಿ ಆಗುತ್ತಿದೆ. ಶಾಲೆಗೆ ರಜೆಯಿದ್ದರೂ ಸುಮಾರು 70 ರಿಂದ 80 ಮಕ್ಕಳು ಬಂದೇ ಬರುತ್ತಾರೆ. ಹೇಗಿದ್ದರೂ ಆಡುತ್ತಾರೆ ಮತ್ತು ಬಿಸಿಯೂಟ ಕೂಡ ಇರುತ್ತದೆ. ಅದರೊಂದಿಗೆ ಮಕ್ಕಳಿಗೆ ಕೊಂಚ ಕಲಿಕೆಯೂ ಆಗಲೆಂದು ಕಂಪ್ಯೂಟರ್ ಮತ್ತು ಇಂಗ್ಲಿಷ್ ಕಲಿಸುತ್ತಿದ್ದೇವೆ’ ಎನ್ನುತ್ತಾರೆ ಶಿಕ್ಷಕರು.
‘ನಮಗೆ ರಜೆ ಕಳೆಯುತ್ತಿರುವುದೇ ತಿಳಿಯುತ್ತಿಲ್ಲ. ಬೆಳಿಗ್ಗೆ ಬಂದರೆ ನಾವು ಮನೆಗೆ ಹೋಗುವುದು ಸಂಜೆಯೇ. ನಮ್ಮ ಸ್ನೇಹಿತರು ಇರುವುದರಿಂದ ಎಲ್ಲಾ ತರಹದ ಆಟಗಳನ್ನೂ ಆಡುತ್ತೇವೆ. ಊಟ ಮಾಡುತ್ತೇವೆ. ಕಂಪ್ಯೂಟರಿನಲ್ಲಿ ಆಡುತ್ತೇವೆ. ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. ಮನೆಗಿಂತ ನಮಗೆ ಶಾಲೆಯೇ ಇಷ್ಟ‘ ಎಂದು ಶಾಲೆಯ ವಿದ್ಯಾರ್ಥಿಗಳಾದ ಶ್ರಾವಣಿ ಮತ್ತು ನಯನ ತಿಳಿಸಿದರು.
- Advertisement -
- Advertisement -
- Advertisement -
- Advertisement -