ತಾಲ್ಲೂಕಿನಾದ್ಯಂತ ಬೇಸಿಗೆಯಲ್ಲಿ ಬಿಡುವ ಕಾಡುಹಣ್ಣುಗಳಲ್ಲಿ ಒಂದಾದ ಈಚಲ ಹಣ್ಣುಗಳು ಗೊಂಚಲು ಗೊಂಚಲಾಗಿ ಬಿಟ್ಟಿದ್ದು ಹಕ್ಕಿಗಳು ಸೇರಿದಂತೆ ಜನರ ಹೊಟ್ಟೆ ತುಂಬಿಸುತ್ತಿವೆ. ಎಲ್ಲೆಡೆ ಈಚಲು ಮರಗಳಲ್ಲಿ ಹಣ್ಣುಗಳು ಹಳದಿಬಣ್ಣದಿಂದ ಕೂಡಿವೆ.
ಈಚಲ ದೊರೆಗಾಯಿ ಸಿಹಿ ಮತ್ತು ಒಗರಿನಿಂದ ಕೂಡಿರುತ್ತವೆ. ಅವು ವಿಶಿಷ್ಠ ರುಚಿಯನ್ನು ನೀಡುವುದರಿಂದ ಇದರ ಬೀಜವನ್ನು ಮಕ್ಕಳು ಬಾಯಿಯಲ್ಲಿ ಅಡಿಕೆಯಂತೆ ನೆನೆಸುತ್ತಾ ಮೆಲ್ಲುತ್ತಾರೆ. ಈ ರೀತಿ ಬೀಜವನ್ನು ಮೆಲ್ಲುವುದರಿಂದ ಲಾಲಾ ರಸದ ಗ್ರಂಥಿ ಚಟುವಟಿಕೆಗೊಂಡು ಅಧಿಕ ಲಾಲಾರಸವನ್ನು ಉತ್ಪತ್ತಿ ಮಾಡಿ ಆಹಾರದ ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ. ಈಚಲ ದೋರೆ ಹಾಗೂ ಹಣ್ಣುಗಳು ಎಂದರೆ ಹಳ್ಳಿ ಹೈದರ ಬಾಯಲ್ಲಿ ನೀರೂರುತ್ತದೆ.
ಈಚಲು ಹಣ್ಣಿನ ಅರಿಶಿನ ಬಣ್ಣದ ಕಾಯಿ ಹಣ್ಣಾದಾಗ ಕಡುಗಪ್ಪುಬಣ್ಣಕ್ಕೆ ತಿರುಗುತ್ತದೆ. ಇದರ ಸಿಪ್ಪೆ ತೆಳುವಾಗಿದ್ದು ಹೆಚ್ಚೂ ಕಡಿಮೆ ಕರ್ಜೂರವನ್ನು ಹೋಲುತ್ತದೆ. ಈಚಲು ಹಣ್ಣಿನಿಂದ ರಕ್ತ ವೃದ್ಧಿ ಹಾಗೂ ಶುದ್ಧಿ ಆಗುತ್ತದೆ. ಇದರಲ್ಲಿ ಕರ್ಜೂರದ ಗುಣಗಳೇ ಇವೆ ಎಂದು ನಾಟಿ ವೈದ್ಯರು ಹೇಳುತ್ತಾರೆ.
ಈಚಲು ಹಣ್ಣನ್ನು ಬಯಲು ಸೀಮೆಯ ಕರ್ಜೂರ ಎಂದೂ ಸಹ ಹೇಳುವುದುಂಟು. ಹಾಗೆಯೇ ಬಡವರ ಕರ್ಜೂರ ಎಂದೂ ಇದು ಹೆಸರುವಾಸಿಯಾಗಿದೆ. ಈ ಹಣ್ಣು ಕೋತಿಗಳಿಗೂ ಪ್ರಿಯ. ಆದರೆ ಕೋತಿ ಮುಳ್ಳು ಗರಿಗಳನ್ನು ದಾಟಿ ಹೋಗಲಾರವು. ಹಣ್ಣು ಉದುರಿದಾಗ ಅವು ಆರಿಸಿ ತಿನ್ನುವುದುಂಟು. ಇನ್ನುಳಿದಂತೆ ಅಳಿಲುಗಳು ಮತ್ತು ಕೆಲವು ಹಕ್ಕಿಗಳಿಗೆ ಇದು ಆಹಾರ.
ಶಾಲೆಯ ರಜೆ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಇವು ಯಥೇಚ್ಛವಾಗಿ ಸಿಗುತ್ತದೆ. ಮುಳ್ಳಿನಂತೆ ಚೂಪಾದ ಗರಿಗಳಿರುವುದರಿಂದ ಕೆಲವು ಹಕ್ಕಿಗಳು ಈಚಲಿನ ಮರದ್ಲಲಿ ಗೂಡು ಕಟ್ಟುತ್ತವೆ. ಈಚೆಗೆ ಈಚಲಿನ ಗೆಲ್ಲುಗಳಿಂದ ಚಾಪೆ ಹೆಣೆಯುವುದು ಹಾಗೂ ಬುಟ್ಟಿ ತಯಾರಿಸುವುದರಿಂದಾಗಿ ಹಣ್ಣುಗಳು ಬಿಡುವುದು ಕಡಿಮೆಯಾಗಿದೆ.