ಅಕ್ರಮ ಸಕ್ರಮ ಯೋಜನೆಯಲ್ಲಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ವತಿಯಿಂದ ರೈತರು ಬೆಸ್ಕಾಮ್ ಇಲಾಖೆಯ ಕಚೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರಾಜ್ಯ ಸರ್ಕಾರ ತಿಳಿಸಿರುವಂತೆ ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ಟ್ರಾನ್ಸ್ಫಾರ್ಮರ್ ಅಳವಡಿಸಲು ತಲಾ 18 ಸಾವಿರ ರೂಗಳನ್ನು ಕಟ್ಟಿಸಿಕೊಂಡಿದ್ದಾರೆ. ಆದರೆ ಬೆಸ್ಕಾಂ ಅಧಿಕಾರಿಗಳು ಐದಾರು ತಿಂಗಳುಗಳು ಕಳೆದರೂ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲು ಮುಂದಾಗಿಲ್ಲ. ವೋಲ್ಟೇಜ್ ಇಲ್ಲದೇ ಮೋಟರ್ಗಳು ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ವಿಳಂಬ ಧೋರಣೆ ರೈತರಿಗೆ ಮಾರಕವಾಗಿದೆ ಎಂದು ದೂರಿದರು.
ಒಂದೆಡೆ ಭೂಮಿಯನ್ನು ನಂಬಿ ಬದುಕುತ್ತಾ, ಹಣ್ಣು ತರಕಾರಿಗಳನ್ನು ಬೆಳೆದುಕೊಡುತ್ತಿರುವ ನಮಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಜನಪ್ರತಿನಿಧಿಗಳು ಬಧ್ದತೆಯನ್ನು ತೋರಿಸುತ್ತಿಲ್ಲ, ಕೊಳವೆಬಾವಿಗಳನ್ನು ಕೊರೆಸಲು, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ಪ್ರತಿಬಾರಿ ಚುನಾವಣೆಗಳಲ್ಲಿಯೂ ಸುಳ್ಳು ಭರವಸೆಗಳನ್ನು ನೀಡಿ ಮತಗಳನ್ನು ಪಡೆದುಕೊಂಡು ಹೋಗುವ ರಾಜಕಾರಣಿಗಳು ಕನಿಷ್ಟ ಮೂರು ಫೇಸ್ ವಿದ್ಯುತ್ ಪೂರೈಕೆಯನ್ನಾದರೂ ಮಾಡಿದರೆ ಇರುವ ನೀರಿನಲ್ಲಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ರೈತ ಮುಖಂಡರು ತಿಳಿಸಿದರು.
ನಮ್ಮ ಭಾಗದ ರೈತರ ಕಷ್ಟವನ್ನು ಕಂಡಾದರೂ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು. ತಮ್ಮ ಪರಿಧಿಯಲ್ಲಿ ಅನುಕೂಲ ಮಾಡಿಕೊಡಬೇಕು. ಮಧ್ಯವರ್ತಿಗಳು ಹಾಗೂ ಗುತ್ತಿಗೆದಾರರಿಗೆ ಹಣ ಪಡೆಯದಂತೆ ಇಲಾಖೆಯ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಈ ಬಾರಿ ಸಾಂಕೇತಿಕವಾಗಿ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಅಧಿಕಾರಿಗಳು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಬೀಗಜಡಿದು ಉಗ್ರವಾದ ಹೋರಾಟಕ್ಕಿಳಿಯುವುದಾಗಿ ಅವರು ಎಚ್ಚರಿಕೆ ನೀಡಿದರು.
ಮನವಿ ಪತ್ರವನ್ನು ಸ್ವೀಕರಿಸಿದ ಬೆಸ್ಕಾಂ ಇಲಾಖೆಯ ಎಇಇ ಪರಮೇಶ್ವರಪ್ಪ ಮಾತನಾಡಿ ರೈತರು ಕಚೇರಿಗೆ ಬಂದು ಹಣವನ್ನು ಕೌಂಟರ್ನಲ್ಲಿ ಕಟ್ಟಿ ರಸೀದಿಯನ್ನು ಪಡೆಯಿರಿ, ಆದ್ಯತೆಯ ಮೇರೆಗೆ ಟ್ರಾನ್ಸ್ಫರ್ಮರ್ಗಳನ್ನು ಅಳವಡಿಸಲಾಗುತ್ತದೆ, ಇಲಾಖೆಯಿಂದ ಆಗಿರುವ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ಕಾರ್ಯಾಧ್ಯಕ್ಷ ಎಂ.ನಾಗರಾಜ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅದ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಪ್ರಧಾನಕಾರ್ಯದರ್ಶಿ ಬಾಲಮುರಳೀಕೃಷ್ಣ, ದೊಡ್ಡತೇಕಹಳ್ಳಿ ಕದಿರಪ್ಪ, ಭಕ್ತರಹಳ್ಳಿ ಪ್ರತೀಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.