ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ರಂಗನಾಥಸ್ವಾಮಿಯ ತೃತೀಯ ತಿರುಕಲ್ಯಾಣ ಮಹೋತ್ಸವವನ್ನು ರಂಗನಾಥಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಭೂನೀಳಾ ಸಮೇತ ರಂಗನಾಥಸ್ವಾಮಿಯ ಕಲ್ಯಾಣ ಮಹೋತ್ಸವವನ್ನು ಉತ್ತರಾಯಣ ವೈಶಾಖ ಮಾಸದ ಶನಿವಾರ ಮತ್ತು ಭಾನುವಾರ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು.
ಬೆಳಿಗ್ಗೆಯಿಂದ ಪ್ರಾರಂಭವಾದ ಸುಪ್ರಭಾತಸೇವೆ, ವಿಶ್ವಕ್ಷೇನಪೂಜೆ, ತುಳಸಿಪೂಜೆ, ಅಗ್ನಿಮುಖ, ಗಣಪತಿಹೋಮ, ನವಗ್ರಹಹೋಮ, ಮಹಾಸುದರ್ಶನಹೋಮ, ಪ್ರಧಾನಹೋಮ, ಶಾಂತಿಹೋಮ, ಪೂರ್ಣಾಹುತಿ, ಪಂಚಾಮೃತಾಭಿಷೇಕ, ಮಹಾಕುಂಭಾಭಿಷೇಕ, ಅಲಂಕಾರ, ಕಲ್ಯಾಣೋತ್ಸವ, ಅಷ್ಟೋತ್ತರ, ರಾಷ್ಟ್ರಾಶಿರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ತಾಲ್ಲೂಕಿನ ವಿವಿದೆಡೆಗಳಿಂದ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನ ಅರ್ಚಕ ಕೆ.ವಿಷ್ಣುವರ್ಧನಾಚಾರ್, ರಂಗನಾಥಸ್ವಾಮಿ ಕುಲಬಾಂಧವರು, ಬೆಳ್ಳೂಟಿ ಗ್ರಾಮಸ್ಥರು ಮತ್ತಿತರರು ಹಾಜರಿದ್ದರು.