ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ದಿಂಬಾರ್ಲಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದಿಸಿದ್ದ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಸುಮಾರು ೬೦ ಕ್ಕೂ ಹೆಚ್ಚು ಮಂದಿಗೆ ಜ್ವರ ಬಂದಿದ್ದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಹೊಸಕೋಟೆ, ದೇವನಹಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಗ್ರಾಮದಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದೆ.
ತಾಲ್ಲೂಕಿನಲ್ಲಿ ಇದೇ ಮೊದಲ ಭಾರಿಗೆ ನೂತನ ಗ್ರಾಮ ಪಂಚಾಯತಿಯಾಗಿ ಘೋಷಣೆಯಾಗಿರುವ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಬಾರ್ಲಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಜ್ವರಕ್ಕೆ ತುತ್ತಾಗಿರುವ ಸಾರ್ವಜನಿಕರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ಫಲಕಾರಿಯಾಗಿಲ್ಲ.
ಗ್ರಾಮಸ್ಥರು ನೆರೆಯ ಚಿಕ್ಕಬಳ್ಳಾಪುರ ಸೇರಿದಂತೆ ವಿವಿದೆಡೆ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮದ ಬಹುತೇಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಇಡೀ ಗ್ರಾಮ ಜನರಿಲ್ಲದೇ ಬಿಕೋ ಎನ್ನುವಂತಿದೆ.
ಚುನಾವಣೆಯ ಸಂದರ್ಭದಲ್ಲಿ ಈ ರೀತಿಯಾಗಿ ಖಾಯಿಲೆಗಳಿಗೆ ಒಳಗಾಗುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದ್ದು ಇದುವರೆಗೂ ಗ್ರಾಮದಲ್ಲಿ ಈ ರೀತಿ ಸಾಮೂಹಿಕವಾಗಿ ಬರುತ್ತಿರುವ ಜ್ವರ ಎಂತಹುದು ಎಂಬುದರ ಮಾಹಿತಿ ಹಾಗು ಗ್ರಾಮದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದಾರೆ.
‘ಗ್ರಾಮದಲ್ಲಿ ಸ್ವಚ್ಚತೆಯಿಲ್ಲದಿರುವುದು, ಎಲ್ಲಂದರಲ್ಲಿ ನೀರು ನಿಂತಿರುವುದು, ತೊಟ್ಟಿಗಳಲ್ಲಿ ಲಾರ್ವಾ ಹೆಚ್ಚಾಗಿರುವುದರಿಂದ ಗ್ರಾಮದಲ್ಲಿ ಈ ರೀತಿಯ ಜ್ವರ ಕಾಣಿಸಿದೆ. ಕಳೆದ ಹದಿನೈದು ದಿನಗಳಿಂದ ವೈದ್ಯರ ತಂಡ ಗ್ರಾಮದಲ್ಲಿಯೇ ಮೊಕ್ಕಾಂ ಹೂಡುವುದರೊಂದಿಗೆ ಮನೆ ಮನೆಗೂ ತೆರಳಿ ಎಲ್ಲಿಯೂ ನೀರು ನಿಲ್ಲದಂತೆ, ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಗ್ರಾಮದಲ್ಲಿ ಆಸ್ಪತ್ರೆಯ ಕಡೆಯಿಂದ ಫಾಗಿಂಗ್ ಮಾಡಿಸಲಾಗುತ್ತಿದೆ.
ಕೆಲ ಗ್ರಾಮಸ್ಥರ ರಕ್ತದ ಮಾದರಿಗಳನ್ನು ಈಗಾಗಲೇ ಪಡೆದುಕೊಂಡಿದ್ದು ಪರೀಕ್ಷೆಗೆ ಒಳಪಡಿಸಿದಾಗ ಒಂದು ಪ್ರಕರಣ ಮಾತ್ರ ಡೆಂಘ್ಯೂ ಜ್ವರ ಎಂಬುದು ಪತ್ತೆಯಾಗಿದೆ. ಪ್ರತಿನಿತ್ಯ ಗ್ರಾಮದ ೨೦ ರಿಂದ ೨೫ ಮಂದಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಇದೀಗ ಪರಿಸ್ಥಿತಿ ಸುದಾರಿಸುತ್ತಿದ್ದು ಈಗ ಐದಾರು ಮಂದಿಯಷ್ಟೆ ಹೆಚ್ಚಿನ ಚಿಕಿತ್ಸೆಗಾಗಿ ಹೋಗುತ್ತಿದ್ದಾರೆ. ಮುಂದಿನ ಒಂದು ವಾರದೊಳಗೆ ಗ್ರಾಮ ಸಹಜಸ್ಥಿತಿಗೆ ಮರಳುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ತಿಳಿಸಿದರು.