ರಕ್ಷಾಬಂಧನದ ಮೂಲಕ ವಸುಧೈವ ಕುಟುಂಬಕಂ, ನಾವೆಲ್ಲ ಸಹೋದರರು ಎಂಬ ಭಾವನೆ ಬೆಳಗಬೇಕಿದೆ. ರಕ್ಷಾ ಬಂಧನ ಸೋದರ ಸಂಬಂಧ, ಪ್ರೀತಿ ಮಮತೆಯ ಪ್ರತೀಕ. ಹೆಣ್ಣನ್ನು ಗೌರವ ಭಾವನೆಯಿಂದ ನೋಡುವ ಮನೋಭಾವ ಮೂಡಿಸುವಲ್ಲಿ ಸಮಾಜ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ಬಿಜೆಪಿ ತಾಲ್ಲೂಕು ಘಟಕದಿಂದ ಆಚರಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹೋದರತ್ವದ ಮಹತ್ವ ಸಾರುವ ರಕ್ಷಾಬಂಧನವು ವಿಶ್ವ ಭ್ರಾತೃತ್ವ ಸಾರುವ ಮಹತ್ವದ ಹಬ್ಬವಾಗಿದೆ. ರಕ್ಷಾಬಂಧನದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮಲ್ಲಿನ ದುರ್ಗುಣ, ದುಶ್ಚಟ, ದುರ್ಬಲತೆಗಳನ್ನು ದೂರ ಮಾಡುವ ಮೂಲಕ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಆರ್ ಎಸ್ ಎಸ್ ವಿಭಾಗೀಯ ಶಾರೀರಿಕ್ ಪ್ರಮುಖ್ ಮು. ವೆಂಕಟೇಶ್ ಮಾತನಾಡಿ, ರಾಖಿ ಹಬ್ಬವು ಕೇವಲ ಸಹೋದರ ಮತ್ತು ಸಹೋದರಿಯರಿಗೆ ಸೀಮಿತವಾದುದಲ್ಲ. ಭಾರತ ಮಾತೆಯನ್ನು ರಕ್ಷಿಸಲು ಸಂಕಲ್ಪ ತೊಡುವ ಹಬ್ಬವೂ ಹೌದು. ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿರುವ ಎಲ್ಲರೂ ದೇಶೋದ್ಧಾರದ ಕುರಿತಂತೆ ಆಲೋಚಿಸುವ ಒಗ್ಗೂಡುವ ಹಬ್ಬವೂ ಆಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಕ್ಷಾಬಂಧನವನ್ನು ಪರಸ್ಪರ ಕಟ್ಟಿಕೊಂಡು ಇತರರಿಗೂ ಕಟ್ಟಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ದಾಮೋದರ್, ಅಶ್ವಕ್ ಅಹ್ಮದ್, ಕೆಂಪರೆಡ್ಡಿ, ರವಿಕುಮಾರ್, ಪುರುಷೋತ್ತಮ್, ಮುನಿರಾಜು, ಮಂಜುಳಮ್ಮ, ಸುಜಾತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -