ಜೀವಜಂತುಗಳಿರುವ ಕಾಡು, ಮಾನವನ ವಾಸಸ್ಥಳವಾದ ಊರು ಒಂದಕ್ಕೊಂದು ಬೆಸೆದುಕೊಂಡಿದೆ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಸಾಮರಸ್ಯ ಇಲ್ಲದಿದ್ದರೆ ಅನೇಕ ಜೀವಿಗಳು ನಾಶವಾಗುತ್ತವೆ.
ಬದುಕಿಗಾಗಿ ನಡೆಯುವ ಇಂಥ ಸಹಬಾಳ್ವೆಯು ಬಾವಲಿಗಳು ಮತ್ತು ಗ್ರಾಮಸ್ಥರ ನಡುವೆ ತಾಲ್ಲೂಕಿನ ಕೋಟಹಳ್ಳಿ ಬಳಿ ಏರ್ಪಟ್ಟಿದೆ. ಪಟ್ಟಣದಿಂದ ದಿಬ್ಬೂರಹಳ್ಳಿಗೆ ಹೋಗುವ ದಾರಿಯಲ್ಲಿ ಕೋಟಹಳ್ಳಿ ಬಳಿ ರಸ್ತೆ ಬದಿಯಿರುವ ನಾಲ್ಕು ಆಲದ ಮರ ಮತ್ತು ಒಂದು ಬೇವಿನ ಮರ ನೂರಾರು ಬಾವಲಿಗಳ ವಾಸಸ್ಥಾನವಾಗಿದೆ. ಮೊದಲು ಒಂದು ಮರದಲ್ಲಿ ವಾಸಿಸುತ್ತಿದ್ದ ಬಾವಲಿಗಳು ಸಂತಾನೋತ್ಪತ್ತಿ ಮಾಡುತ್ತಾ ಈಗ ಐದು ಮರಗಳಿಗೆ ವಿಸ್ತರಿಸಿವೆ. ಇದಕ್ಕೆ ಮುಖ್ಯ ಕಾರಣ ಕೋಟಹಳ್ಳಿ ಮತ್ತು ಶೆಟ್ಟಹಳ್ಳಿ ಗ್ರಾಮಸ್ಥರು ಈ ಬಾವಲಿಗಳಿಗೆ ತೊಂದರೆಯಾಗದಂತೆ ರಕ್ಷಣೆ ನೀಡುತ್ತಿರುವುದು. ಹಾರಾಡುವ ಸಸ್ತನಿಯಾದ ಬಾವಲಿ ಉದ್ದುದ್ದ ಕೈಕಾಲುಗಳು, ಜೋತಾಡುವ ರೆಕ್ಕೆಯ ಪರೆ, ದೊಡ್ಡ ಕಿವಿ, ತೀಕ್ಷ್ಣ ಕಣ್ಣುಗಳು ಮತ್ತು ನರಿಯನ್ನು ಹೋಲುವ ಮುಖದಿಂದಾಗಿ ಕುರೂಪಿಯಾಗಿ ಕಾಣುತ್ತದೆ. ಆದರೆ ಕೋಟಿಗಟ್ಟಲೆ ಹಾನಿಕಾರಕ ಕೀಟಗಳನ್ನು ತಿಂದು ರೈತರ ಬೆಳೆಗೆ ರಕ್ಷಣೆ ಒದಗಿಸುತ್ತದೆ ಮತ್ತು ಇದರ ಮಲ ಉತ್ತಮ ಗೊಬ್ಬರ ಕೂಡ. ಇವು ಸಮೂಹ ಜೀವಿಗಳು. ಹಗಲ್ಲೆಲಾ ತಲೆಕೆಳಗಾಗಿ ನಿದ್ರಿಸುತ್ತಿದ್ದು ಮುಸ್ಸಂಜೆಯ ಸಮಯದಲ್ಲಿ ಆಹಾರ ಸಂಪಾದನೆಗೆ ಹೊರಡುವ ಬಾವಲಿ ನಿಶಾಚರ ಜೀವಿ.
ಬಾವಲಿಯ ರಾತ್ರಿ ಹಾರಾಟಕ್ಕೆ ಸಹಾಯಕವಾಗುವುದು ಅದರ ವಿಶಿಷ್ಟವಾದ ಧ್ವನಿಪೆಟ್ಟಿಗೆ ಮತ್ತು ಕಿವಿ. ಅದು ನಿರ್ದಿಷ್ಟ ಸಮಯಗಳಲ್ಲಿ ೧೦,೦೦೦ ದಿಂದ ೫೦,೦೦೦ದ ತನಕ ಆವರ್ತಾಂಕವುಳ್ಳ ಧ್ವನಿಯ ಸ್ಪಂದನಗಳನ್ನು ಹೊರಡಿಸುತ್ತದೆ. ಸುತ್ತಮುತ್ತಲ ವಸ್ತುಗಳಿಂದ ಬಂದ ಪ್ರತಿಧ್ವನಿಯನ್ನು ಕಿವಿಗಳು ವಿಶ್ಲೇಷಿಸುವುದರಿಂದ ಕತ್ತಲಲ್ಲಿ ಬಾವಲಿ ಅಡೆತಡೆ ಮತ್ತು ಆಹಾರವನ್ನು ಗುರುತಿಸುತ್ತದೆ. ಈ ತಂತ್ರಜ್ಞಾನವನ್ನು ರಾಡಾರ್ ಮತ್ತು ಸೋನಾರ್ ಉಪಕರಣಗಳಲ್ಲಿ ಕಾಣಬಹುದು.
‘ಹಲವಾರು ವರ್ಷಗಳಿಂದ ಈ ಬಾವಲಿಗಳು ಇಲ್ಲಿವೆ. ಮೊದಲು ಕಡಿಮೆಯಿದ್ದವು. ಈಗ ಹೆಚ್ಚಾಗಿವೆ. ಇವುಗಳಿಂದ ನಮಗೇನೂ ತೊಂದರೆಯಿಲ್ಲ. ಬದಲಿಗೆ ಬೆಳೆಗಳಿಗೆ ತೊಂದರೆ ಮಾಡುವ ಕೀಟಗಳನ್ನು ತಿಂದು ಸಹಾಯ ಮಾಡುತ್ತವೆ. ಬಾವಲಿಗಳನ್ನು ಬೇಟೆಯಾಡಲು ಇಲ್ಲಿ ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಕೋಟಹಳ್ಳಿ ಗ್ರಾಮಸ್ಥರು ಹೇಳುತ್ತಾರೆ.
- Advertisement -
- Advertisement -
- Advertisement -
- Advertisement -