ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಎಂ.ಇಂದಿರಾ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾವು ಸಲ್ಲಿಸುತ್ತಿರುವ ಸೇವೆಯಲ್ಲಿ ವೃತ್ತಿಬದ್ಧತೆ, ಸಮಯಪ್ರಜ್ಞೆ, ಸೇವಾಮನೋಭಾವ ಇದ್ದರೆ ಉತ್ತಮಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರಿ ನೌಕರನಲ್ಲಿ ಪ್ರಾಮಾಣಿಕತೆಯಿರಬೇಕು. ಮಾಡುವ ಕೆಲಸದಲ್ಲಿ ಪಾರದರ್ಶಕತೆ ಇದ್ದರೆ ಯಾವುದೇ ಅನುಮಾನಗಳಿಗೆ ಆಸ್ಪದವಿರುವುದಿಲ್ಲ. ಆಗ ಮಾತ್ರ ನಿವೃತ್ತಿಯ ನಂತರ ಮಾನಸಿಕ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ತಾವು ಮಾಡಿದ ಉತ್ತಮಸೇವೆಯೇ ನಿವೃತ್ತಿಯ ನಂತರವೂ ಎಲ್ಲರ ಮನಸ್ಸಿನಲ್ಲಿ ಉಳಿಯುವುದು. ತಮ್ಮಿಂದ ಸಮಾಜಕ್ಕೆ ಆಗಬಹುದಾದ ಅನುಕೂಲಗಳನ್ನು ನಿಸ್ವಾರ್ಥ ಮನೋಭಾವದಿಂದ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಬಿ.ರವೀಂದ್ರ ಮಾತನಾಡಿ, ಸರ್ಕಾರಿ ವೃತ್ತಿ ಬದುಕಿನಲ್ಲಿ ಏರಿಳಿತಗಳು ಸಾಮಾನ್ಯವಾದರೂ ಎಲ್ಲವನ್ನೂ ಸಮರ್ಥವಾಗಿ ಪ್ರಾಮಾಣಿಕವಾಗಿ ನಿಭಾಯಿಸಬೇಕು. ಸೇವಾರಂಭದ ದಿನಗಳಲ್ಲಿ ಸಿಗುವ ಆರಂಭಿಕ ಸೂಕ್ತ ಸರಿಯಾದ ಮಾರ್ಗದರ್ಶನದಿಂದ ಮಾತ್ರ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ. ವ್ಯಕ್ತಿ ಮತ್ತು ಸಮಾಜ ನಡುವೆ ಬಿಡಿಸಲಾಗದ ಬಾಂಧವ್ಯವಿರಬೇಕು ಎಂದರು.
ವಯೋನಿವೃತ್ತಿ ಹೊಂದಿದ ಶಿಕ್ಷಕಿ ಎಂ.ಇಂದಿರಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಕೆಂಪಣ್ಣ, ಎಚ್.ಎಸ್.ರುದ್ರೇಶಮೂರ್ತಿ, ಮಂಜುಳಾ, ಸರ್ದಾರ್‌ಚಾಂದ್‌ಪಾಶಾ, ಕಮಲಾ, ಸಿದ್ಧರಾಜು, ಗೋವಿಂದರಾಜು, ಹನುಮಂತಪ್ಪ, ಶಿಕ್ಷಕವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.