ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದ್ದರೆ ಮಾತ್ರ ಜನರ ಸಮಸ್ಯೆಗಳನ್ನು ನಿವಾರಿಸಲು ಮತ್ತು ರೈತರಿಗೆ ಅನುಕೂಲವಾಗಲು ಸಾಧ್ಯ. ಎಂಬತ್ತೈದು ವರ್ಷಗಳ ನಾನು ರಾಜಕೀಯ ಮಾಡಬೇಕಾದ ಅಗತ್ಯವಿಲ್ಲ. ಸ್ವಾರ್ಥವೂ ಇಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು ಶಕ್ತಿ ಮೀರಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ನಡೆದ 101 ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ವಧೂವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.
ಅವಿಭಾಜಿತ ಕೋಲಾರ ಜಿಲ್ಲೆ ಹಿಂದಿನಿಂದಲೂ ಜೆಡಿಎಸ್ ಪಕ್ಷದ ಭದ್ರ ಬುನಾದಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಮೊದಲಿನಿಂದಲೂ ನಮಗೆ ಆಶೀರ್ವಾದ ಮಾಡುತ್ತಿದ್ದಾರೆ. ನನ್ನ ಹುಟ್ಟುಹಬ್ಬದ ಪ್ರಯುಕ್ತ ಜೆಡಿಎಸ್ ಪಕ್ಷದಿಂದ 101 ಸಾಮೂಹಿಕ ವಿವಾಹ ನಡೆಸಿ ಅವರ ಬಾಳಿಗೆ ಅನುಕೂಲ ಮಾಡಿಕೊಟ್ಟು, ಪಕ್ಷದ ಸಿದ್ದಾಂತದಂತೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ರುದ್ರಭೂಮಿಗಾಗಿ 4.08 ಎಕರೆ ಜಮೀನನ್ನು ನೀಡುವ ಮತ್ತು ವಾಲ್ಮೀಕಿ ಜನಾಂಗದವರಿಗೆ ಉಚಿತ ನಿವೇಶನ ನೀಡುತ್ತಿರುವ ಉದಾತ್ತ ಗುಣ ಅಭಿನಂದನೀಯ ಎಂದು ಹೇಳಿದರು.
ಶಿಡ್ಲಘಟ್ಟ ಕ್ಷೇತ್ರದ ಶಾಸಕ ಎಂ.ರಾಜಣ್ಣ ಹಾಗೂ ಮುಖಂಡ ಬಿ.ಎನ್.ರವಿಕುಮಾರ್ ಇವರಿಬ್ಬರೂ ನನಗೆ ಎರಡು ಕಣ್ಣುಗಳಿದ್ದಂತೆ. ನಾನು ಶ್ರೀರಾಮ ನಾದರೆ ನೀವು ಲವ-ಕುಶರಿದ್ದಂತೆ ಹಾಗಾಗಿ ಇಬ್ಬರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ಇಬ್ಬರನ್ನು ವಿಧಾನಸಭೆಗೆ ಯಾವ ರೀತಿ ಕರೆದೊಯ್ಯಬೇಕು ಎನ್ನುವುದು ನನಗೆ ಗೊತ್ತಿದೆ. ಪಕ್ಷದಲ್ಲಿ ಇಬ್ಬರಿಗೂ ಉತ್ತಮ ಸ್ಥಾನ ಮಾನ ನೀಡುವ ಜವಾಬ್ದಾರಿ ನನಗೆ ಬಿಡಿ ಎಂದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ಹಾಗು ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಲು ಆಗಿಲ್ಲ. ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಅಧಿಕಾರ ಹಿಡಿಯಲಿದ್ದು ಅಧಿಕಾರಕ್ಕೆ ಬಂದ ಕೇವಲ ೨೪ ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವ ತೀರ್ಮಾನವನ್ನು ಪಕ್ಷ ಕೈಗೊಂಡಿದೆ. ಹಾಗಾಗಿ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಬೇಕು ಎಂದು ಹೇಳಿದರು.
ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ೮೫ ನೇ ಹುಟ್ಟುಹಬ್ಬದ ಅಂಗವಾಗಿ ಅವರ ಮೇಲಿನ ಅಭಿಮಾನದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳು ಸೇರಿದಂತೆ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯ ಜನಪ್ರಿಯ ಕಾರ್ಯಕ್ರಮಗಳು ಜೆಡಿಎಸ್ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರಲಿವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಎಚ್.ಡಿ.ದೇವೇಗೌಡ ಹಾಗು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್, ತಾಲ್ಲೂಕಿನ ಜನರ, ರೈತರ, ನಿರುದ್ಯೋಗಿಗಳ ಹಾಗೂ ನೀರಿನ ಸಮಸ್ಯೆಗಳನ್ನು ನಿವಾರಿಸಲು ಶಾಶ್ವತ ಯೋಜನೆ ಹಾಗೂ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿದರು.
ನೂತನ ವಧೂವರರಿಗೆ ಒಂದೊಂದು ಹಸು ಹಾಗೂ ತೆಂಗಿನ ಸಸಿಯನ್ನು ವಿತರಿಸಲಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಂದ ಮಹರ್ಷಿ ವಾಲ್ಮೀಕಿ ಸಮುದಾಯ ಭವನಕ್ಕೆ ಉಚಿತ ನಿವೇಶನ ಮತ್ತು ಮುಸ್ಲೀಂ ಸಮುದಾಯದವರಿಗೆ ರುದ್ರಭೂಮಿಗೆ 4.08 ಎಕರೆಯನ್ನು ಹಸ್ತಾಂತರಿಸಲಾಯಿತು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಮನೋಹರ್, ಚೌಡರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಂಕ್ ಮುನಿಯಪ್ಪ, ಜಯರಾಮರೆಡ್ಡಿ, ತನುಜಾ ರಘು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ಪಿ.ವಿ.ನಾಗರಾಜ್, ಜೆಡಿಎಸ್.ತಾಲ್ಲೂಕು ಅಧ್ಯಕ್ಷ ಧನಂಜಯರೆಡ್ಡಿ, ನಗರಸಭಾ ಅಧ್ಯಕ್ಷ ಅಫ್ಸರ್ಪಾಷ, ಬಿ.ನಾರಾಯಣಸ್ವಾಮಿ, ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ರಾಜಶೇಖರ್, ಸಯ್ಯದ್, ಸಲೀಂಪಾಷ, ಹೈದರಾಲಿ, ಅಮೀರ್ಜಾನ್, ಫಯಾಜ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -