ಕರ್ನಾಟಕದ ಗತಕಾಲದ ವೈಭವವನ್ನು ಸ್ಮರಿಸುವುದರೊಂದಿಗೆ ನಮ್ಮ ಮಾತೃ ಭಾಷೆಯ ಅಭಿವೃಧ್ದಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ರಾಷ್ಟ್ರೀಯ/ನಾಡ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 61 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಬಹಳ ಪುರಾತನವಾದ ಹಿನ್ನೆಲೆಯಿದೆ, ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ.
ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೆ ಹೋದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೆ ವ್ಯವಹರಿಸಬೇಕಾಗುತ್ತದೆ ಎಂದ ಅವರು ಅತ್ಯಂತ ಪ್ರಾಚೀನ ಭಾಷೆಯಾದ ಕನ್ನಡವನ್ನು ನಮ್ಮ ರಾಜ್ಯದಲ್ಲಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಖಾಸಿಂ ಮಾತನಾಡಿ ವರ್ಷಕ್ಕೊಮ್ಮೆ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಮಂತ್ರ ಜಪಿಸುವ ನಾವುಗಳು ನಮ್ಮ ಮಕ್ಕಳನ್ನು ಕನ್ನಡ ಭಾಷೆಯಿಂದ ದೂರವಿಡುವುದಷ್ಟೇ ಅಲ್ಲದೇ ಇಂಗ್ಲೀಷ್ ವ್ಯಾಮೋಹ ಬೆಳೆಸುತ್ತಿದ್ದೇವೆ ಎಂದರು.
ನಾವು ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಸೇರಿದಂತೆ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ ಎಂದರು.
ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ. ಕನ್ನಡ ಭಾಷೆಗೆ ನೀಡಬೇಕಾದ ಗೌರವ ನೀಡುವುದನ್ನು ಎಲ್ಲಿಯವರೆಗೆ ಕೊಡುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭಾಷೆಯಲ್ಲಿ ಶೇ 100 ರಷ್ಟು ಅಂಕಗಳನ್ನು ಪಡೆದ ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಸೀಲ್ದಾರ್ ಕೆ.ಎಂ. ಮನೋರಮಾ, ಕ್ಷೇತ್ರಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ಅಪ್ಸರ್‍ಪಾಷ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಕೆ. ಲಕ್ಷ್ಮಿನಾರಾಯಣ, ಕ.ಸಾ.ಪ. ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ರಾಜ್ಯ ರೈತ ಸಂಘ ಹಾಗು ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -