ಅಸಂಘಟಿತ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಅದನ್ನು ಬಗೆಹರಿಸುವುದು ಜೆಡಿಎಸ್ ಪಕ್ಷದ ಪ್ರಮುಖ ಉದ್ದೇಶಗಳಲ್ಲೊಂದು ಎಂದು ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಶ್ರೀರಾಮಯ್ಯ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಮಟ್ಟದ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರುಗಳ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ನಿವಾರಿಸಬೇಕು ಹಾಗೂ ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ಪಕ್ಷದ ಮೂಲಕ ಹೋರಾಟ ಮಾಡುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದರು.
ಜೆಡಿಎಸ್ ಪ್ರಭಾರಿ ರಾಜ್ಯಾಧ್ಯಕ್ಷ ಎಂ.ಎಸ್.ನಾರಾಯಣರಾವ್ ಮಾತನಾಡಿ, ರಾಷ್ಟ್ರಾದ್ಯಂತ 2000 ಕೋಟಿ ರೂಗಳಷ್ಟು ಹಣ ಮೀಸಲಿದ್ದರೂ ಕೇವಲ 100 ಕೋಟಿ ರೂಗಳಷ್ಟು ಮಾತ್ರ ಖರ್ಚು ಮಾಡಲಾಗಿದೆ. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ದುಡಿಯುವ ಕಾರ್ಮಿಕರ ಪರವಾಗಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಹಲವಾರು ಐಟಿಐ ಫ್ಯಾಕ್ಟರಿಗಳನ್ನು ಮುಚ್ಚುತ್ತಿರುವುದು ದುರದೃಷ್ಟಕರ. ಎಚ್.ಎಂ.ಟಿ ಫ್ಯಾಕ್ಟರಿ ಕೂಡ ಅವಸಾನದತ್ತ ಸಾಗಿರುವುದು ದುರಂತ. ಇವೆಲ್ಲ ಕಾರ್ಮಿಕ ವಿರೋಧಿ ನೀತಿಯ ಉದಾಹರಣೆಗಳಾಗಿವೆ ಎಂದು ನುಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಕಾರ್ಯಕರ್ತರು ನಿಷ್ಠೆಯಿಂದ ಇರುವರು. ನಮ್ಮ ಭಾಗಕ್ಕೆ ಶಾಶ್ವತ ನೀರಾವರಿಯನ್ನು ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು. ಈಗಿನ ಸಿದ್ಧರಾಮಯ್ಯನವರ ಸರ್ಕಾರ ಯಾಂತ್ರಕವಾಗಿದೆ ಅಷ್ಟೆ. ತಾಂತ್ರಿಕವಾಗಿ ಕೆಲಸ ಮಾಡುತ್ತಿಲ್ಲ. ನೀಡಿದ ಆಶ್ವಾಸನೆಗಳನ್ನು ಮರೆತು ಧೀರ್ಘ ಕಾಲಿಕ ಯೋಜನೆಗಳನ್ನು ರೂಪಿಸದೆ ಜಡವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಚ್ಚೇಗೌಡ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ತುಲ್ಲ ಮಾತನಾಡಿದರು.
ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಗಂಗುಲಪ್ಪ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀ, ಜಿಲ್ಲಾ ಘಟಕದ ಅಧ್ಯಕ್ಷ ಕನಕಪ್ರಸಾದ್, ಜೆಡಿಎಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಆಯಿಷಾ ಸುಲ್ತಾನ್, ತಾಲ್ಲೂಕು ಪಂಚಾಯತಿ ಸದಸ್ಯೆಯರಾದ ರಾಧಿಕಾ, ಮಂಜುಳ, ನೇತ್ರಾ, ಮುಖಂಡರಾದ ಮುನಿವೆಂಕಟಸ್ವಾಮಿ, ಅಫ್ಸರ್ ಪಾಷ ಮುಂತಾದವರು ಪಾಲ್ಗೊಂಡಿದ್ದರು.
ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಮಟ್ಟದ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರುಗಳ ಕಾರ್ಯಕಾರಿಣಿ ಸಭೆ
- Advertisement -
- Advertisement -
- Advertisement -
- Advertisement -