ಸಾಹಿತ್ಯದ ಪರಿಚಾಲಕನಾಗಿ ಪ್ರತಿಯೊಂದು ಗ್ರಾಮದಲ್ಲೂ ಕನ್ನಡದ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿದ್ದು, ಕನ್ನಡ ಬಂಧುಗಳ ಪ್ರೋತ್ಸಾಹ ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಎನ್.ಶ್ರೀನಿವಾಸ್ ತಿಳಿಸಿದರು.
ನಗರದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಸಿದ ಕ.ಸಾ.ಪ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಜಾತಿ, ವೃತ್ತಿ, ಧರ್ಮ, ಮೇಲು ಕೀಳೆಂಬ ಬೇಧವಿಲ್ಲದೆ ಕನ್ನಡ ಸೇವೆಯನ್ನು ಕರ್ತವ್ಯದಂತೆ ಕ.ಸಾ.ಪ ಇದುವರೆಗೂ ನಡೆದುಕೊಂಡು ಬಂದಿದ್ದು, ಮುಂದೆಯೂ ಈ ಬದ್ಧತೆ ಮುಂದುವರೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಮುಂತಾದ ಹಲವು ಆಶೋತ್ತರಗಳನ್ನು ಬೆನ್ನಿಗೆ ಕಟ್ಟಿಕೊಂಡು ಮುಂದುವರೆದಿದ್ದೇನೆ. ಇಪ್ಪತ್ತು ಅಂಶಗಳ ಆಶೋತ್ತರಗಳನ್ನು ಕನ್ನಡ ಬಂಧುಗಳ ಮುಂದಿಟ್ಟಿದ್ದೇನೆ. ಎಲ್ಲರ ಸಹಕಾರದಿಂದ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಮಾಡುವ ಹಂಬಲವಿದೆ ಎಂದು ಹೇಳಿದರು.
ಸಾಹಿತಿ ಗೋಪಾಲಗೌಡ ಕಲ್ವಮಂಜರಿ ಮಾತನಾಡಿ, ಕ.ಸಾ.ಪ ಗೆ ಸೇವೆ ಸಲ್ಲಿಸುವವರು ಬಹು ಮುಖ್ಯವಾಗಿ ವಚನಕ್ಕೆ ಬದ್ಧರಾಗಿರಬೇಕು. ಕನ್ನಡ ಸೇವೆಯಲ್ಲಿ ಜಾತಿ, ಧರ್ಮ ಮತ್ತು ರಾಜಕೀಯ ಬೆರೆಸಬಾರದು. ಕನ್ನಡ ಸೇವೆಗೆ ಮುಂದಾಗುವ ಯುವಕರು ಮತ್ತು ಉತ್ಸಾಹಿಗಳಿಗೆ ಪ್ರೋತ್ಸಾಹವನ್ನು ನೀಡುವುದು ಹಿರಿಯರ ಕರ್ತವ್ಯ ಎಂದು ಹೇಳಿದರು.
ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್ ಮಾತನಾಡಿ, ಕ.ಸಾ.ಪ ಮೂಲಕ ನಡೆಸಿರುವ ವಿವಿಧ ಕಾರ್ಯಕ್ರಮಗಳು ಪಾರದರ್ಶಕವಾಗಿವೆ. ಎಲ್ಲಾ ಲೆಕ್ಕಪತ್ರಗಳನ್ನು ಒಪ್ಪಿಸಲಾಗಿದೆ. ಆದರೂ ಹಣ ದುರುಪಯೋಗ ಮಾಡಿದ್ದಾರೆಂಬ ಇಲ್ಲಸಲ್ಲದ ಆರೋಪಗಳನ್ನು ಕೆಲವರು ಮಾಡುತ್ತಿರುವುದು ದುರಂತ ಎಂದು ಹೇಳಿ ಲೆಕ್ಕಪತ್ರಗಳ ವಿವರಗಳನ್ನು ಪ್ರದರ್ಶಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕ.ಸಾ.ಪ ಸದಸ್ಯರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಕೈವಾರ ಎನ್.ಶ್ರೀನಿವಾಸ್ ಅವರಿಗೆ ಬೆಂಬಲವನ್ನು ಸೂಚಿಸಿದರು.
ಸಾಹಿತಿ ಕಾಗತಿ ವೆಂಕಟರತ್ನಮ್, ಯಲುವಳ್ಳಿ ಸೊಣ್ಣೇಗೌಡ, ಅಮೃತಕುಮಾರ್, ಬಿ.ಆರ್.ಅನಂತಕೃಷ್ಣ, ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಮಂಚಿನಬಲೆ ಶ್ರೀನಿವಾಸ್, ವಿ.ಕೃಷ್ಣ, ಕೆ.ಎಂ.ವಿನಾಯಕ, ಮಂಜುನಾಥ್, ನಾಗರಾಜ್, ಜೆ.ಎಸ್.ವೆಂಕಟಸ್ವಾಮಿ, ಡಾ.ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.