Home News ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ

ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ

0

ಯುವ ಪೀಳಿಗೆ ಸ್ಪರ್ಧಾತ್ಮಕ ಯುಗದಲ್ಲಿರುವುದರಿಂದ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಉತ್ಕೃಷ್ಟತೆಯನ್ನು ಸಾಧಿಸಿದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಉದಯವಾಣಿ ಸಮೂಹ ಸಂಪಾದಕ ರವಿ ಹೆಗಡೆ ತಿಳಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
11oct2ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್.ಎಸ್.ಎಲ್.ಸಿ, ಪಿ.ಯು.ಸಿ ನಂತರದ ದಿನಗಳಲ್ಲಿ ಹಾಗೂ ಜೀವನದ ತಿರುವುಗಳಲ್ಲಿ ಕಷ್ಟಗಳು ಎದುರಾಗುತ್ತದೆ. ಆಗ ಕಷ್ಟಗಳನ್ನು ಎದುರಿಸುತ್ತಾ ಕುದಿಯುವ ನೀರಿಗೆ ಬಿದ್ದ ಕಾಫಿ ಬೀಜ ಹೊಸ ಪೇಯದ ಸೃಷ್ಟಿಗೆ ಕಾರಣವಾಗು ರೀತಿಯಲ್ಲಿ ಸಮಾಜದಲ್ಲಿ ಹೊಸ ಹರಿಕಾರರಾಗಿ ರೂಪುಗೊಳ್ಳಬೇಕು ಎಂದು ಪ್ರೇರಣಾದಾಯಕವಾಗಿ ಹೇಳಿದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ, ಪ್ರತಿಯೊಬ್ಬ ನಾಗರೀಕರಿಗೂ ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಹಾಗೂ ಪಾಲ್ಗೊಳ್ಳುವಿಕೆಯಿರಬೇಕು. ವಿದ್ಯಾವಂತರು, ಸುಶಿಕ್ಷಿತರು, ಅನುಕೂಲಸ್ಥರು ಸಮಾಜದಿಂದ ಪಡೆದ ಋಣವನ್ನು ತೀರಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವುದು ಹಾಗೂ ಸಾಧಕರನ್ನು ಸನ್ಮಾನಿಸುವ ಕಾರ್ಯ ಇತರರಿಗೆ ಪ್ರೇರಕ ಮತ್ತು ಸ್ಫೂರ್ತಿದಾಯಕ. ನಮ್ಮ ತಾಲ್ಲೂಕಿನಲ್ಲಿ ಹಲವಾರು ಸಾಧಕರಿದ್ದಾರೆ ಎಂಬ ವಿಷಯವೇ ಇಂದಿನ ಪೀಳಿಗೆಗೆ ಪ್ರೇರಣದಾಯಕ. ಪುರಸ್ಕೃತಗೊಂಡ ತಾಲ್ಲೂಕಿನ ಪ್ರತಿಭಾವಂತರು ಮುಂದೆ ಸಾಧಕರಾಗಿ ಹುಟ್ಟೂರಿನ ಕೀರ್ತಿಯನ್ನು ಎಲ್ಲೆಡೆ ಹಬ್ಬಿಸುವಂತಾಗಲಿ. ಜಾತಿ ಬೇಧವಿಲ್ಲದೆ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪುರಸ್ಕರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಟ್ರಸ್ಟ್ನ ಈವರೆಗಿನ ಸಾಧನೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಸೂರ್ಯನಾರಾಯಣರಾವ್, ಎಚ್.ವಿ.ರಾಮಚಂದ್ರರಾವ್, ನಾರಾಯಣಾಚಾರ್, ವಿ.ಸೀತಾಲಕ್ಷ್ಮಿ, ಪ್ರಕಾಶ್ಚಂದ್ರ ಕೃಷ್ಣಮೂರ್ತಿ ಅವರನ್ನು ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ಶಿಕ್ಷಣದಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ 23 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ರವಿ ಹೆಗಡೆ. ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ, ಉದ್ಯಮಿ ಕ್ರಮದಾತಿ ಶ್ರೀಧರ್, ಅಖಿಲಭಾರತ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್, ಸ್ತ್ರೀರೋಗತಜ್ಞ ಡಾ.ಐ.ಎಸ್.ರಾವ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಪಟೇಲ್ ಪಾಂಡು, ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ವಿ.ಕೃಷ್ಣ, ಶೋಭಾರಾಣಿ, ಶ್ರೀಕಾಂತ್, ಕೃಷ್ಣಮೂರ್ತಿ, ಸತೀಶ್, ಎಸ್.ಆರ್.ಸಕಲೇಶ್ಕುಮಾರ್, ಮಾಧವರಾವ್, ಎಚ್.ವಿ.ನಾಗೇಂದ್ರ, ರಾಮಮೋಹನಶಾಸ್ತ್ರಿ ಮತ್ತಿತರರು ಹಾಜರಿದ್ದರು.