‘ರೈತ ವಿರೋಧಿಗಳಿಗೆ ಧಿಕ್ಕಾರ’ ಎಂದು ಘೋಷಣೆ ಕೂಗುತ್ತಾ ರೈತ ಮುಖಂಡರು ಬಿಗಿ ಪೊಲೀಸ್ ಬಂದೋಬಸ್ತನ್ನು ಲೆಕ್ಕಿಸದೆ, ತಡೆಯಲು ಬಂದ ಪೊಲೀಸರನ್ನು ತಳ್ಳಿಕೊಂಡು ಹೋಗಿ ಚಿಂತಾಮಣಿ ಕಡೆಯಿಂದ ಬಂದ ರೈಲನ್ನು ತಡೆದು ಬ್ಯಾನರ್ ಕಟ್ಟುವಲ್ಲಿ ಯಶಸ್ವಿಯಾದರು.
ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಸೇರಿದ್ದ ನೂರಾರು ಮಂದಿ ರೈತರು ಮತ್ತು ರೀಲರುಗಳು ರೇಷ್ಮೆ ಗೂಡಿನ ಬೆಲೆ ಕುಸಿದಿದ್ದ ಪರಿಣಾಮ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರೈತರೊಂದಿಗೆ ಪೊಲೀಸರ ವಾಗ್ವಾದ ನಡೆಯಿತು. ‘ಬೇಕಿದ್ದರೆ ಮನವಿ ಪತ್ರ ಕೊಡಿ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ. ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟಿಸುವಂತಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡಬಾರದು’ ಎಂದ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೂರ್ತಿ ಅವರೊಂದಿಗೆ ರೈತರು ವಾದಕ್ಕಿಳಿದರು. ‘ರೇಷ್ಮೆ ಗೂಡಿನ ಬೆಲೆ ಕುಸಿತದಿಂದ ತಾಲ್ಲೂಕಿನಾದ್ಯಂತ ರೇಷ್ಮೆ ಉದ್ದಿಮೆಯನ್ನು ನಂಬಿರುವವರು ಸಂಕಷ್ಟದಲ್ಲಿರುವಾಗ ನಮ್ಮನ್ನು ಆಳುವ ಸರ್ಕಾರಕ್ಕೆ ನಮ್ಮ ನೋವನ್ನು ತಿಳಿಸಲು ಇದು ಏಕೈಕ ಮಾರ್ಗ. ವಿದೇಶಿ ರೇಷ್ಮೆಯ ಆಮದು ಸುಂಕವನ್ನು ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಸ್ಥಳೀಯ ರೇಷ್ಮೆ ಉದ್ದಿಮೆಯನ್ನು ನಾಶ ಮಾಡಲು ಹೊರಟಿದೆ. ರೈತರನ್ನು ಬೆಂಬಲಿಸದ ಸರ್ಕಾರಕ್ಕೆ ನಾವು ಧಿಕ್ಕಾರ ಹೇಳುತ್ತೇವೆ. ರೇಷ್ಮೆಯನ್ನು ನಂಬಿ ರೈತರು, ರೀಲರುಗಳು, ಟ್ವಿಸ್ಟರುಗಳು, ಕೂಲಿ ಕಾರ್ಮಿಕರು ಸೇರಿದಂತೆ ಲಕ್ಷಾಂತರ ಮಂದಿ ಬದುಕು ಅತಂತ್ರವಾಗಿದೆ. ಜನರು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ’ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಕೋಲಾರದಿಂದ ಚಿಂತಾಮಣಿ ಮಾರ್ಗವಾಗಿ ರೈಲು ಬರುತ್ತಿದ್ದಂತೆಯೇ ರೈತರು ರೈಲನ್ನು ತಡೆಯದಂತೆ ಪೊಲೀಸರು ಸರ್ಪಗಾವಲು ಹಾಕಿದರು. ಘೋಷಣೆಗಳನ್ನು ಕೂಗುತ್ತಾ ರೈತರು ‘ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ’ಯ ಬ್ಯಾನರ್ ಹಿಡಿದು ಪೊಲೀಸರನ್ನು ತಳ್ಳಿಕೊಂಡು ರೈಲಿನ ಮುಂದೆ ಸಾಗಿ ಹಳಿಗಳ ಮೇಲೆ ದುಮುಕಿ ರೈಲಿಗೆ ಅಡದ್ಡವಾಗಿ ನಿಂತು ಘೋಷಣೆಗಳನ್ನು ಕೂಗಿದರು.
ಸಭೆ:
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ವತಿಯಿಂದ ಬೆಲೆ ಕುಸಿದಿರುವ ರೇಷ್ಮೆ ಗೂಡಿನ ಪರಿಣಾಮದ ಬಗ್ಗೆ ಚರ್ಚಿಸಲು ಸಭೆಯನ್ನು ಆಯೋಜಿಸಲಾಗಿತ್ತು.
ವಾಣಿಜ್ಯ ಉದ್ದಿಮೆಯಾದ ರೇಷ್ಮೆಯನ್ನು ನಂಬಿ ತಾಲ್ಲೂಕಿನಾದ್ಯಂತ ಲಕ್ಷಾಂತರ ಕುಟುಂಬಗಳು ಬದುಕುತ್ತಿದ್ದು, ಒಂದು ಕೆಜಿ ರೇಷ್ಮೆ ಗೂಡಿಗೆ 120 ರೂಗಳ ವರೆಗೆ ಬೆಲೆ ಕುಸಿದಿದ್ದು, ಇದನ್ನು ನಂಬಿದವರ ಬದುಕು ಅತಂತ್ರವಾಗಿದೆ. ಈ ಬಗ್ಗೆ ಹಲವು ಬಾರಿ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದರೂ ರೇಷ್ಮೆ ಹಿತರಕ್ಷಣೆಗಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲಗೊಂಡಿದೆ. ರೈತರು ಕಷ್ಟಪಟ್ಟು ಬೆಳೆದ ರೇಷ್ಮೆ ಗೂಡನ್ನು ಗಲೀಜು ಹಾಗೂ ಅವ್ಯವಸ್ಥೆಯಿರುವ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ನೆಲದ ಮೇಲೆ ಹಾಕುವ ಪರಿಸ್ಥಿತಿಯಿದೆ. ಕೋಟ್ಯಾಂತರ ಆದಾಯ ಸರ್ಕಾರಕ್ಕೆ ಈ ಮಾರುಕಟ್ಟೆಯಿಂದ ಬಂದರೂ ಇಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ರೇಷ್ಮೆ ಉದ್ದಿಮೆಯ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಚಿಕ್ಕಾಬಳ್ಳಾಪುರ ಎಸ್.ಪಿ. ಕಚೇರಿಯ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಜೂನ್ 20 ರಂದು ಬಂದ್ ಮಾಡಿ ಪ್ರತಿಭಟಿಸಲು ತೀರ್ಮಾನಿಸಲಾಯಿತು. ಸರ್ಕಾರಕ್ಕೆ ನಮ್ಮ ನೋವು ತಿಳಿಯಬೇಕಿದ್ದರೆ ರೈಲನ್ನು ಮಂಗಳವಾರ ತಡೆದು ಪ್ರತಿಭಟಿಸಲು ಒಕ್ಕೊರಲಿನಿಂದ ತೀರ್ಮಾನಿಸಿ ಅದರಂತೆ ರೈಲ್ ರೋಕೋ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಎಸ್.ಎಂ.ನಾರಾಯಣಸ್ವಾಮಿ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಅಬ್ಲೂಡು ಆರ್.ದೇವರಾಜ್, ಮಳಮಾಚನಹಳ್ಳಿ ದೇವರಾಜ್, ಮಂಜುನಾಥ್, ಎಚ್.ಜಿ.ಗೋಪಾಲಗೌಡ, ರಾಮಚಂದ್ರಪ್ಪ, ವೈ.ರಾಮಕೃಷ್ಣಪ್ಪ, ಅಬ್ದುಲ್ ಅಜೀಜ್, ಮುನಿನಂಜಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -