ಜಗತ್ತು ಜ್ಞಾನದ ಮೇಲೆ ನಿಂತಿದೆ. ಹಣದ ಮೇಲಲ್ಲ. ಯಾವ ದೇಶದಲ್ಲಿ ಪುಸ್ತಕಕ್ಕೆ ಗೌರವ ಸಿಗುತ್ತದೆಯೋ ಅದು ಅಭಿವೃದ್ಧಿ ಹೊಂದುತ್ತದೆ. ಪುಸ್ತಕಗಳು ದೇಶವನ್ನು ಕಟ್ಟುವ ಸಾಧನಗಳು ಎಂದು ಪ್ರೊ.ಕೋಡಿರಂಗಪ್ಪ ಅಭಿಪ್ರಾಯಪಟ್ಟರು.
ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ತಾಲ್ಲೂಕು ಕಸಾಪ ಮತ್ತು ಬಿಜಿಎಸ್ ವಿದ್ಯಾಸಂಸ್ಥೆ ನಡೆಸಿದ ‘ನನ್ನ ಮೆಚ್ಚಿನ ಪುಸ್ತಕ’ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಗ್ರಂಥಾಲಯದ ಪ್ರಕಾರ ಪ್ರತಿಯೊಬ್ಬರೂ ವರ್ಷಕ್ಕೆ ಸರಾಸರಿ ಎರಡು ಸಾವಿರ ಪುಟಗಳಷ್ಟು ಓದಬೇಕು. ಆದರೆ ಭಾರತೀಯರು ಕೇವಲ 33 ಪುಟಗಳಷ್ಟು ಓದುತ್ತಾರೆ ಎಂಬ ಆಘಾತಕರ ವಿಷಯ ಸಮೀಕ್ಷೆಯಿಂದ ತಿಳಿದುಬಂದಿದೆ. ಪುಸ್ತಕಗಳು ಜೀವವನ್ನು ಕಟ್ಟುವ, ಜೀವನವನ್ನು ರೂಪಿಸುವ ಕೆಲಸ ಮಾಡುತ್ತವೆ. ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ಓದುವುದು ಬಿಟ್ಟು ಸಿದ್ಧ ಪ್ರಶ್ನೋತ್ತರಗಳನ್ನು ಓದುತ್ತಿರುವುದು ದುರಂತ. ಅರ್ಥಗ್ರಹಿಕೆಯ ವಾಚನವನ್ನು ಅಳವಡಿಸಿಕೊಳ್ಳಲು ಶಿಕ್ಷಕರು ನೆರವಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಪುಸ್ತಕಗಳ ಶಕ್ತಿಯನ್ನು ಕಂಡುಕೊಳ್ಳಬೇಕು. ಓದುವುದು ಊಟದಂತೆ ಜೀವನದ ಅವಿಭಾಜ್ಯ ಅಂಗವಾಗಬೇಕು. ಬಟ್ಟೆಯನ್ನು ಕೊಳ್ಳುವಂತೆ ವರ್ಷಕ್ಕೆ ಕನಿಷ್ಠ ಹತ್ತು ಪುಸ್ತವನ್ನಾದರೂ ಕೊಂಡು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಎಸ್ಎಸ್ಎಲ್ಸಿ ಓದುವ ಓದಿರುವ ಪ್ರತಿಯೊಬ್ಬರೂ ಸಾರ್ವಜನಿಕ ಗ್ರಂಥಾಲಯದ ಸದಸ್ಯರಾಗಬೇಕು. ಪುಸ್ತಕವನ್ನು ಓದಿ, ಗ್ರಹಿಸಿಕೊಂಡಲ್ಲಿ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆಯಾಗುತ್ತದೆ. ಹೊಸ ಆಲೋಚನೆಗಳು ಹುಟ್ಟುತ್ತವೆ. ಕಲಿಯುವ ಸಮಾಜ, ಓದುವ ಸಮಾಜ ಸೃಷ್ಠಿಯಾಗಬೇಕು. ಬಡವರು ಅದರಲ್ಲೂ ಹೆಣ್ಣುಮಕ್ಕಳು ಹೆಚ್ಚು ಓದಬೇಕು. ಇದರಿಂದ ಮೌನವಾದ ಆಲೋಚನೆಗಳು, ಸುಪ್ತ ಚಿಂತನೆಗಳು, ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ನುಡಿದರು.
ಜನಪದ ಗಾಯಕ ದೇವರಮಳ್ಳೂರು ಮಹೇಶ್ ಕನ್ನಡದ ಹಿರಿಮೆ ಸಾರುವ ಹಾಗೂ ಜಾನಪದ ಗೀತೆಗಳನ್ನು ಹಾಡಿದರು.
ತಾವು ಓದಿದ ಪುಸ್ತಕಗಳ ಬಗ್ಗೆ ಮಾತನಾಡಿದ ಹನ್ನೊಂದು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಪಡೆದ ಹನುಮೇಶ್, ದ್ವಿತೀಯ ಸ್ಥಾನ ಪಡೆದ ಎನ್.ನಾಗೇಂದ್ರ ಮತ್ತು ತೃತೀಯ ಸ್ಥಾನ ಪಡೆದ ಕೆ.ಮಧುಸೂದನ್ ಅವರಿಗೆ ತಾಲ್ಲೂಕು ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಾಗಿ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳಿಗೆ ಕಸಾಪ ವತಿಯಿಂದ ಪ್ರಶಂಸಾ ಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿ ಅಮೃತ್ಕುಮಾರ್, ಪ್ರಾಂಶುಪಾಲ ಮಹದೇವ್, ಡಿ.ಜಿ.ಮಲ್ಲಿಕಾರ್ಜುನ, ಉಪನ್ಯಾಸಕ ಗಿರೀಶ್, ಕಸಾಪ ಉಪಾಧ್ಯಕ್ಷ ಚೌಡಸಂದ್ರ ಪಿ.ಈ.ಕರಗಪ್ಪ, ಖಜಾಂಚಿ ಎಸ್.ಸತೀಶ್, ಸದಸ್ಯ ಸ್ನೇಕ್ ನಾಗರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.