ಮುಂಜಾನೆ ಸೇವಿಂಗ್ ಶಾಪ್‌ಗೆ ತೆರಳಿದ್ದ ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಿಲ್ಟ್ರೀವೆಂಕಟರಮಣಪ್ಪ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಸಮೀಪದಲ್ಲಿರುವ ಕೃಷ್ಣ ಹೇರ್‌ಡ್ರೇಸಸ್‌ಗೆ ಮುಂಜಾನೆ ೬ ಗಂಟೆಯ ಸಮಯದಲ್ಲಿ ತಮ್ಮ ಸಹಾಯ ಸುರೇಶ್ ಎಂಬುವವರೊಂದಿಗೆ ತೆರಳಿದ ವೆಂಕಟರಮಣಪ್ಪ ಶೇವಿಂಗ್ ಮಾಡಿಸಿಕೊಳ್ಳಲು ಕುಳಿತಿದ್ದಾಗ ಮುಸುಕುಧಾರಿಗಳಾಗಿ ಬಂದಿದ್ದ ಇಬ್ಬರು ಮಚ್ಚು ಮತ್ತು ರಾಡ್‌ಗಳಿಂದ ಹೊಡೆದಿರುವ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಹಿನ್ನೆಲೆ: ಬಡ ಕುಟುಂಬದ ಹಿನ್ನೆಲೆಯಿದ್ದ ವೆಂಕಟರಮಣಪ್ಪ ತನ್ನ ತಂದೆಗೆ ಒಬ್ಬನೇ ಗಂಡು ಮಗನಾಗಿದ್ದರು. ಚಿಕ್ಕವಯಸ್ಸಿನಲ್ಲಿ ಮಿಲ್ಟ್ರಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರಿಂದ ಅವರಿಗೆ ಮಿಲ್ಟ್ರಿ ವೆಂಕಟರಮಣಪ್ಪ ಎಂಬ ಹೆಸರು ಬಂದಿತ್ತು. ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇವರ ಮೇಲೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಸಹ ಆಗಿತ್ತು. ಪುರಸಭಾ ಸದಸ್ಯರಾಗಿ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣದ ತಾಲ್ಲೂಕು ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿ ನೀರಾವರಿ ಹೋರಾಟ, ರೇಷ್ಮೆ ಬೆಳೆಗಾರರ ಹೋರಾಟಗಳು ಸೇರಿದಂತೆ ಅನೇಕ ಹೋರಾಟಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಒಂದು ತಿಂಗಳ ಹಿಂದೆ ನಗರದ ಎಸ್.ವಿ.ಗಣೇಶ್ ನಗರದಲ್ಲಿ ಯೋಗಿ ನಾರೇಯಣ ಎಜುಕೇಷನ್ ಟ್ರಸ್ಟ್ ವತಿಯಿಂದ ವಿದ್ಯಾಸಂಸ್ಥೆ ಸ್ಥಾಪನೆ ಮಾಡಲು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮತ್ತು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರಿಂದ ಗುದ್ದಲಿ ಪೂಜೆ ನೆರವೇರಿಸಿದ್ದರು. ಮೃತ ವೆಂಕಟರಮಣಪ್ಪ ಅವರಿಗೆ ಇಬ್ಬರು ಪತ್ನಿಯರು ಆರು ಮಂದಿ ಮಕ್ಕಳು ಇದ್ದಾರೆ.
ಮೂರು ಬಾರಿ ಹತ್ಯಾ ಯತ್ನ: ರೌಡಿಶೀಟರ್ ಸಹ ಆಗಿದ್ದ ಮಿಲ್ಟ್ರಿ ವೆಂಕಟರಮಣಪ್ಪ ಅವರ ಮೇಲೆ ಈ ಹಿಂದೆ ದಿಬ್ಬೂರಹಳ್ಳಿ ರಸ್ತೆ, ಬಸ್ ನಿಲ್ದಾಣದ ಬಳಿ ಮತ್ತು ಪೂಜಮ್ಮ ದೇವಾಲಯದ ಬಳಿ ಮೂರು ಬಾರಿ ಹತ್ಯೆ ಯತ್ನ ನಡೆದಿತ್ತು. ಅದೃಷ್ಟವಶಾತ್ ಪಾರಾಗಿದ್ದರು.
ಮಿಲ್ಟ್ರಿ ವೆಂಕಟರಮಣಪ್ಪ ಅವರ ಕೊಲೆಯು ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಜಮಾಯಿಸಿದ್ದ ಸಾವಿರಾರು ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು. ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೈತ್ರಾ, ಡಿ.ವೈಎಸ್‌ಪಿ ಕೃಷ್ಣಮೂರ್ತಿ, ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೋಲಾರಕ್ಕೆ ರವಾನಿಸಲಾಯಿತು. ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಗಳು ಇದೇ ಮೊದಲಲ್ಲ: ಶಿಡ್ಲಘಟ್ಟದ ನಿವಾಸಿಗಳಾದ ನರಸಿಂಹ ಮತ್ತು ಮಂಜುನಾಥ್ ಎಂಬ ಸಹೋದರರು ಚಿಕ್ಕಬಳ್ಳಾಪುರಕ್ಕೆ ಕೋರ್ಟ್‌ಗೆ ಹೋಗುತ್ತಿದ್ದಾಗ ೨೦೧೦ ರ ಆಗಸ್ಟ್೨೧ ರಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾತವಾರದ ಬಳಿ ಕೊಲೆ ಮಾಡಲಾಗಿತ್ತು. ಈ ಜೋಡಿ ಕೊಲೆ ಪ್ರಕರಣದ ಸಂಬಂಧ ಬಂಧಿತನಾಗಿದ್ದ ಶಿಡ್ಲಘಟ್ಟ ತಾಲ್ಲೂಕಿನ ಮೋಹನ್ ಅಲಿಯಾಸ್ ಬೋದಗೂರು ಮೋಹನ್ ಎಂಬಾತನನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೋಹನ್‌ನನ್ನು ೨೦೧೨ ರಲ್ಲಿ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಇತ್ತಿಚೆಗೆ ನಗರದಲ್ಲಿ ಶಾಂತಿಯ ವಾತಾವರಣವಿತ್ತು. ಆದರೆ ಈ ಕೊಲೆ ನಡೆದಿರುವುದರಿಂದ ಆತಂಕದ ವಾತಾವರಣವಿದ್ದು ಬಸ್ ನಿಲ್ದಾಣ, ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
- Advertisement -
- Advertisement -
- Advertisement -
- Advertisement -