ತಾಲ್ಲೂಕಿನ ಕೊತ್ತನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಮಂದಿಗೆ ಜ್ವರ ಬಂದಿದ್ದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಸೇರಿದಂತೆ ಹೊಸಕೋಟೆ, ಚಿಂತಾಮಣಿ, ದೇವನಹಳ್ಳಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಗ್ರಾಮದ ಜನರಲ್ಲಿ ಭೀತಿ ಆವರಿಸಿದೆ.
ಗ್ರಾಮದ ಚರಂಡಿಗಳು ಸೇರಿದಂತೆ ಗ್ರಾಮದ ಸ್ವಚ್ಚತೆ ಬಗ್ಗೆ ಕಾಳಜಿ ವಹಿಸದ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಡೀ ಗ್ರಾಮದ ಜನತೆ ವಿವಿಧ ರೀತಿಯ ಜ್ವರದಿಂದ ಬಳಲುವಂತಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಿಸ್ಟನ್ ಸೇರಿದಂತೆ ಚರಂಡಿಗಳು ಸ್ವಚ್ಚತೆಗೊಳಿಸುವಂತೆ ಈಗಾಗಲೇ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೂ ಸ್ವಚ್ಚತೆ ಮಾಡಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ವಿವಿಧ ರೀತಿಯ ಜ್ವರ ಕಾಣಿಸಿಕೊಂಡು ಗ್ರಾಮದ ಬಹುತೇಕ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ಹತ್ತು ದಿನಗಳಿಂದ ನಗರದ ಸಾರ್ವಜನಿಕ ಆಸ್ಪತ್ರೆ ಮತ್ತು ಹುಣಸೇನಹಳ್ಳಿ ಆರೋಗ್ಯ ಕೇಂದ್ರದ ವೈದ್ಯರು ಗ್ರಾಮದಲ್ಲಿ ಮೊಕ್ಕಾಂ ಹೂಡಿ ಚಿಕಿತ್ಸೆ ನೀಡುತ್ತಿದ್ದರೂ ಯಾವುದೇ ಫಲಕಾರಿಯಾಗಿಲ್ಲ.
ಈ ರೀತಿಯಾಗಿ ಖಾಯಿಲೆಗಳಿಗೆ ಒಳಗಾಗುತ್ತಿರುವುದು ಜನರಲ್ಲಿ ಆತಂಕ ಮನೆ ಮಾಡಿದ್ದು ಇದುವರೆಗೂ ಗ್ರಾಮದಲ್ಲಿ ಈ ರೀತಿ ಸಾಮೂಹಿಕವಾಗಿ ಬರುತ್ತಿರುವ ಜ್ವರ ಎಂತಹುದು ಎಂಬುದರ ಮಾಹಿತಿ ಹಾಗು ಗ್ರಾಮದಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಸೂಕ್ತ ಸಮಯದಲ್ಲಿ ಕೈಗೊಳ್ಳದ ಬಗ್ಗೆ ಆರೋಗ್ಯ ಇಲಾಖೆ ಹಾಗು ಗ್ರಾಮ ಪಂಚಾಯತಿ ಅಧಿಕಾರಿಗಳು ಮಾಹಿತಿ ಗೌಪ್ಯವಾಗಿಟ್ಟಿದ್ದಾರೆ.
ಈ ಬಗ್ಗೆ ವೈ ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಕೃಷ್ಣ ಅವರನ್ನು ವಿಚಾರಿಸಿದರೆ ಕಳೆದ ಹದಿನೈದು ದಿನಗಳಿಂದ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿದೆ. ಕೆಲವರಿಗೆ ವೈರಾಣುವಿನಿಂದುಂಟಾಗುವ ಜ್ವರ ಕಾಣಿಸಿದ್ದು ಕೆಲವರಿಗೆ ಶಂಕಿತ ಡೆಂಗ್ಯೂ ಜ್ವರ ಇರಬಹುದು ಎಂಬ ಕಾರಣಕ್ಕೆ ರಕ್ತದ ಮಾದರಿ ಸಂಗ್ರಹಿಸಿ ಜಿಲ್ಲಾ ಸ್ಪತ್ರೆಗೆ ಕಳುಹಿಸಿಕೊಡಲಾಗಿದೆ, ಇನ್ನೂ ವರದಿ ಬಂದಿಲ್ಲ ಎನ್ನುತ್ತಾರೆ.
ಗ್ರಾಮದಲ್ಲಿ ಸ್ವಚ್ಚತೆಯಿಲ್ಲದಿರುವುದು ಸೇರಿದಂತೆ ಎಲ್ಲಂದಿರಲ್ಲಿ ನೀರು ನಿಂತಿರುವುದು, ತೊಟ್ಟಿಗಳಲ್ಲಿ ಲಾರ್ವಾ ಹೆಚ್ಚಾಗಿರುವುದರಿಂದ ಗ್ರಾಮದಲ್ಲಿ ಈ ರೀತಿಯ ಜ್ವರ ಕಾಣಿಸಿದೆ. ಕಳೆದ ಹತ್ತು ದಿನಗಳಿಂದ ವೈದ್ಯರ ತಂಡ ಗ್ರಾಮದಲ್ಲಿಯೇ ಮೊಕ್ಕಾಂ ಹೂಡುವುದರೊಂದಿಗೆ ಮನೆ ಮನೆಗೂ ತೆರಳಿ ಎಲ್ಲಿಯೂ ನೀರು ನಿಲ್ಲದಂತೆ, ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವಂತೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ.
‘ಕೊತ್ತನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇರಾವುದೇ ಗ್ರಾಮಗಳಲ್ಲಿಯೂ ಜ್ವರ ಕಾಣಿಸಿಕೊಂಡಿಲ್ಲ, ಬರೀ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಮಾತ್ರ ಕಾಣಿಸಬೇಕು ಎಂದರೆ ಅದಕ್ಕೆ ಮಾವಿನ ಹಣ್ಣಿನ ಕಾಲದಲ್ಲಿ ಗ್ರಾಮಸ್ಥರು ಬೇರೆ ಕಡೆಗೆ ಕೂಲಿಗಾಗಿ ಹೋಗುವುದು ಕಾರಣ. ಹಾಗಾಗಿ ಪ್ರತಿ ವರ್ಷವೂ ಮಾವಿನಹಣ್ಣಿನ ಕಾಲದಲ್ಲಿ ಗ್ರಾಮದಲ್ಲಿ ಜ್ವರ ಬರುವುದು ಸಾಮಾನ್ಯ ಅಷ್ಟೇ ಹೊರತು ಗ್ರಾಮದಲ್ಲಿ ಕುಡಿಯುವ ನೀರಿನ ಸಿಸ್ಟನ್ ಸೇರಿದಂತೆ ಚರಂಡಿ ಸ್ವಚ್ಚತೆ ಕಾರ್ಯ ಮಾಡಲಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಶ್ವತ್ಥಪ್ಪ.
ಪಿಂಡಿಪಾಪನಹಳ್ಳಿ ಗ್ರಾಮದ ಮುನಿಯಪ್ಪ, ಭಾಗ್ಯಮ್ಮ, ಸೌಮ್ಯ, ಮಧು, ರಂಜಿತ್, ಶಿವಕುಮಾರ್, ರಾಜೇಂದ್ರ, ಹರೀಶ್, ಶ್ರಾವಣಿ, ವರುಣ್, ವಿಶ್ವಾಸ್, ಮತ್ತಿತರರು ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಸೇರಿದಂತೆ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಪಡೆದು ಕೆಲವರು ಮನೆಗಳಿಗೆ ವಾಪಸ್ ಬಂದಿದ್ದರೆ ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.