ನಾಡೋಜ ಪ್ರಶಸ್ತಿ ಪುರಸ್ಕೃತರಾದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಗ್ರಾಮವಾದ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತತ್ವಪದ ಗಾಯಕಿ ಲಕ್ಷ್ಮಮ್ಮ ಎಂಬುವರಿಗೆ ಈ ಬಾರಿಯ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಗಂಡನನ್ನು ಕಳೆದುಕೊಂಡು ಮಗನೊಂದಿಗೆ ಚಿಕ್ಕ ಹೊಲದಲ್ಲಿ ಮಳೆಯಾಶ್ರಿತ ಬೆಳೆ ಬೆಳೆದುಕೊಂಡು ಜೀವಿಸುತ್ತಿರುವ ಪಿಂಡಿಪಾಪನಹಳ್ಳಿಯ ಲಕ್ಷ್ಮಮ್ಮ ಗ್ರಾಮದ ಮಹಿಳೆಯರ 20 ಮಂದಿ ತಂಡವನ್ನು ಕಟ್ಟಿಕೊಂಡು ಭಜನೆ ಮತ್ತು ತತ್ವಪದವನ್ನು ವಿವಿದೆಡೆ ತೆರಳಿ ನಡೆಸಿಕೊಡುತ್ತಾರೆ. ಪ್ರತಿ ಶುಕ್ರವಾರ ತಮ್ಮ ತಂಡದೊಂದಿಗೆ ಗ್ರಾಮದ ಸತ್ಯಮ್ಮನ ಗುಡಿ ಮತ್ತು ಮಂಗಳವಾರ ಗಂಗಮ್ಮನ ಗುಡಿಯಲ್ಲಿ ಭಜನೆ ಹಾಗೂ ಗಾಯನ ನಡೆಸುತ್ತಾರೆ. ಈಗಾಗಲೇ ತಿರುಪತಿ ಸೇರಿದಂತೆ ವಿವಿದೆಡೆ ತೆರಳಿ ಗಾಯನವನ್ನು ನಡೆಸಿಕೊಟ್ಟು ಬಂದಿದ್ದಾರೆ.
ಈಕೆಯ ಮಗ ಮಧು ತಮಟೆ ಕಲಾವಿದ ನಾಡೋಜ ಮುನಿವೆಂಕಟಪ್ಪ ಅವರ ಶಿಷ್ಯನಾಗಿದ್ದು, ಅವರೊಂದಿಗೆ ಎರಡು ಬಾರಿ ಅಮೆರಿಕೆಯ ಪ್ರವಾಸ ಮಾಡಿ ಕಲಾಪ್ರದರ್ಶನ ಮಾಡಿ ಬಂದಿದ್ದಾನೆ.
ಜಾನಪದ ಅಕಾಡೆಮಿ ಪ್ರಶಸ್ತಿಯು ಪ್ರಕಟವಾದ ಹಿನ್ನೆಲೆಯಲ್ಲಿ ಮಂಗಳವಾರ ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪಿಂಡಿಪಾಪನಹಳ್ಳಿಯ ಲಕ್ಷ್ಮಮ್ಮ ಅವರನ್ನು ಸನ್ಮಾನಿಸಿದರು.
‘ನಮ್ಮದೇ ಗ್ರಾಮದ ತತ್ವಪದ ಗಾಯಕಿ ಲಕ್ಷ್ಮಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸುತ್ತಿರುವುದು ಸಂತಸ ತಂದಿದೆ. ಕಳೆದ ವರ್ಷ ಗಂಡನನ್ನು ಕಳೆದುಕೊಂಡ ಈಕೆ ಮಗನೊಂದಿಗೆ ಪುಟ್ಟ ಮನೆಯಲ್ಲಿ ಹೊಲದ ಆಸರೆಯಲ್ಲಿ ಜೀವಿಸುತ್ತಿದ್ದಾಳೆ. ತತ್ವಪದ ಗಾಯನದ ತಂಡವೊಂದನ್ನು ಕಟ್ಟಿಕೊಂಡು ದೇವರಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾಳೆ. ಈ ಪ್ರಶಸ್ತಿಯು ಕಲಾವಿದರಿಗೆ ಪ್ರೇರಕ ಮತ್ತು ಪ್ರೋತ್ಸಾಹದಾಯಕ’ ಎಂದು ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಿಳಿಸಿದರು.
‘ಕಲಬುರ್ಗಿಯಲ್ಲಿ ಡಿಸೆಂಬರ್ 27ರಂದು ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ ಮೊದಲ ವಾರಕ್ಕೆ ದೂಡಲಾಗಿದೆ ಎಂದು ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ’ ಎಂದು ಅವರು ಹೇಳಿದರು.