ಎಷ್ಟೇ ಚುರುಕುಮತಿಗಳಾದರೂ, ಬುದ್ಧಿವಂತರಾದರೂ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುವಾಗ ಭಯಪಡುತ್ತಾರೆ. ಸರಿಯಾಗಿ ಓದುವುದು ಮತ್ತು ಪರೀಕ್ಷೆಗೆ ತಯಾರಾಗುವುದು ಒಂದು ಕಲೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ‘ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ’ ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.
ಜ್ಞಾನ ಸಂಪಾದನೆಗಾಗಿ ಅಧ್ಯಯನ ಮಾಡುವುದು ಎಷ್ಟು ಮುಖ್ಯವೋ, ಪರೀಕ್ಷೆಯಲ್ಲಿ ಯಶಸ್ವಿಯಾಗುವುದಕ್ಕಾಗಿ ಅಧ್ಯಯನ ಮಾಡುವುದು ಅಷ್ಟೇ ಮುಖ್ಯ. ಯಶಸ್ಸಿನ ರಹಸ್ಯವಿರುವುದು ಏಕಾಗ್ರತೆಯಲ್ಲಿ. ಓದಿನಲ್ಲಿ ತನ್ಮಯತೆ ಮತ್ತು ಸತತ ಅಭ್ಯಾಸದಿಂದ ಏಕಾಗ್ರತೆಯನ್ನು ಪಡೆದುಕೊಳ್ಳಬಹುದು. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಭಯ ಹೋಗುತ್ತದೆ ಎಂದು ಹೇಳಿದರು.
ಪರೀಕ್ಷಾ ಸಿದ್ಧತೆಯನ್ನು ಏಳು ಹಂತಗಳಲ್ಲಿ ಮಾಡಿಕೊಳ್ಳುವುದರ ಕುರಿತು, ವಿದ್ಯಾರ್ಥಿಗಳು ಅನುಸರಿಸಬೇಕಾದ ತಂತ್ರಗಳು, ಜವಾಬ್ದಾರಿಗಳ ಬಗ್ಗೆ ಹಾಗೂ ಶೇಕಡಾ 100 ರಷ್ಟು ಅಂಕಗಳನ್ನು ಗಳಿಸುವುದರ ಬಗ್ಗೆ ಮಾರ್ಗದರ್ಶನ ನೀಡಿದರು.
ಮುಖ್ಯ ಶಿಕ್ಷಕಿ ಕೆ.ಮಂಜುಳಾ, ಶಿಕ್ಷಕರಾದ ಸೈಯಿದಾ ಇಷ್ರತ್, ಜಮೀಲಾ ಖಾತೂನ್, ಸರ್ದಾರ್ ಚಾಂದ್ಪಾಷ, ಎಂ.ಇಂದಿರಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.