ಆಲೀಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆ ನಷ್ಟವಾಗಿದ್ದು ರೈತರಿಗೆ ಹೆಚ್ಚಿನ ಪರಿಹಾರ ಧನ ನೀಡಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮೇಲೂರು ಸೇರಿದಂತೆ ಚೌಡಸಂದ್ರ ಗ್ರಾಮದ ದ್ರಾಕ್ಷಿ ತೋಟಗಳಿಗೆ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮಂಗಳವಾರ ಸಂಜೆ ಸುರಿದ ಆಲೀಕಲ್ಲು ಮಳೆಯಿಂದ ಮೇಲೂರು, ಭಕ್ತರಹಳ್ಳಿ, ಚೌಡಸಂದ್ರ, ಅಪ್ಪೇಗೌಡನಹಳ್ಳಿ, ಮಳ್ಳೂರು, ಬೆಳ್ಳೂಟಿ, ಕಾಕಚೊಕ್ಕಂಡಹಳ್ಳಿ ಗ್ರಾಮದ ಬಹುತೇಕ ದ್ರಾಕ್ಷಿ ತೋಟ ಹಾಗೂ ರೇಷ್ಮೆ, ದಾಳಿಂಬೆ ಹಾಗು ಗೋಡಂಬಿ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ ಎಂದರು.
ಪೃಕೃತಿ ವಿಕೋಪದಡಿ ಬೆಳೆಹಾನಿಯಾಗಿ ರೈತ ಕಂಗಾಲಾಗುವ ಸ್ಥಿತಿ ತಲುಪಿದ್ದು ಎಲ್ಲರೂ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸುವಂತೆ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದರು.
ತಾಲ್ಲೂಕಿನಾಧ್ಯಂತ ಬೆಳೆ ಹಾನಿಯಾಗಿರುವ ತೋಟಗಳಿಗೆ ಅಧಿಕಾರಿಗಳ ತಂಡ ಬೇಟಿ ನೀಡಿ ರೈತರಿಗಾಗಿರುವ ನಷ್ಟದ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಅವರು ನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರಧನ ಸಿಗುವಂತೆ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರದ ರಾಮೇಗೌಡ, ಶ್ರಿರಾಮರೆಡ್ಡಿ ಹಾಗೂ ರಾಮಚಂದ್ರಪ್ಪ ತೋಟಗಳು ಸೇರಿದಂತೆ ಮೇಲೂರಿನ ಕೆ.ಎಸ್.ನಂಜೇಗೌಡ, ಬಿ.ಎನ್.ರವಿಕುಮಾರ್, ಕೆ.ಬಿ.ನಾರಾಯಣಸ್ವಾಮಿ ಅವರ ದ್ರಾಕ್ಷಿ ತೋಟಗಳಿಗೆ ಅವರು ಭೇಟಿ ನೀಡಿದರು.
ತಹಶೀಲ್ದಾರ್ ಕೆ.ಎಂ.ಮನೋರಮಾ, ರೇಷ್ಮೆ ಕೃಷಿ ಉಪನಿರ್ದೇಶಕ ನಾಗಭೂಷಣ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೇಗೌಡ, ತೋಟಗಾರಿಕೆ ಇಲಾಖೆಯ ಆನಂದ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್ ಮತ್ತಿತರರು ಹಾಜರಿದ್ದರು.
ಪರಿಶೀಲನೆ ನೆಪದಲ್ಲಿ ರಾಜಕೀಯ: ಮಂಗಳವಾರ ರಾತ್ರಿ ಸುರಿದ ಆಲೀಕಲ್ಲು ಮಳೆಯಿಂದ ನಷ್ಟವುಂಟಾದ ರೈತರಿಗೆ ಆತ್ಮಸ್ಥೈರ್ಯ ತುಂಬಬೇಕಾದ ಶಾಸಕ ಎಂ.ರಾಜಣ್ಣ ಕೇವಲ ಜೆಡಿಎಸ್ ಮುಖಂಡರ ಹಾಗೂ ಪಕ್ಷದ ರೈತರ ತೋಟಗಳಿಗೆ ಮಾತ್ರ ಭೇಟಿ ನೀಡಿದರೆ ಮಾಜಿ ಸಚಿವ ವಿ.ಮುನಿಯಪ್ಪ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗು ರೈತರ ತೋಟಗಳಿಗೆ ಮಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವಿಶೇಷವಾಗಿತ್ತು.
ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ರೈತರ ತೋಟಗಳಿಗೆ ಭೇಟಿ ನೀಡಿದ್ದು ಒಂದೇ ಸಮಯದಲ್ಲಾಗಿದ್ದರಿಂದ ಅಧಿಕಾರಿಗಳು ಹಾಲಿ ಶಾಸಕರೊಟ್ಟಿಗಿರಬೇಕೋ ಅಥವ ಮಾಜಿ ಸಚಿವರ ಜೊತೆ ಹೋಗಬೇಕೊ ಎನ್ನುವುದು ಅರ್ಥವಾಗದೇ ಪೇಚಾಡುತ್ತಿದ್ದರು.
- Advertisement -
- Advertisement -
- Advertisement -
- Advertisement -