ಅಭಿವೃದ್ಧಿ ಹೆಸರಲ್ಲಿ ಅವ್ಯಾಹತವಾಗಿ ಮರಗಳನ್ನು ಕಡಿಯಲಾಗುತ್ತಿದೆ. ಶುದ್ಧ ಗಾಳಿ, ನೆರಳು ನೀಡುವ ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯ. ಆದ್ದರಿಂದ ನಾವು ವೃಕ್ಷ ರಕ್ಷಣೆಯ ತೀರ್ಮಾನಗಳನ್ನು ಕೈಗೊಳ್ಳಬೇಕು. ಸಾಧ್ಯವಾದಷ್ಟೂ ಮರಗಳನ್ನು ನೆಡುವುದು, ಸಾಧ್ಯವಾದರೆ ಸಸ್ಯಗಳ ಪೋಷಣೆ ಬಗ್ಗೆ ಗಮನ ಹರಿಸುವುದು ಎಲ್ಲರ ಧ್ಯೇಯವಾಗಲಿ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಂಜುನಾಥ್ ತಿಳಿಸಿದರು.
ನಗರದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಸೋಮವಾರ ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೀವ ಸಂಕುಲಕ್ಕೆ ಬದುಕಲು ಅತ್ಯಾವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಪರಿಸರದಲ್ಲಿ ವೃದ್ಧಿಯಾಗಲು ಪ್ರತಿಯೊಬ್ಬರು ಸಸಿ ನೆಟ್ಟು ನೀರೆರೆದು ಬೆಳೆಸಬೇಕು. ಸಸಿ ನೆಟ್ಟರೆ ಸಾಲದು. ನೆಟ್ಟಿರುವ ಸಸಿಯನ್ನು ಬೆಳೆಯುವಂತೆ ನೋಡಿಕೊಳ್ಳುವ ಮೂಲಕ ಮರವೊಂದನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡಬೇಕು. ವಸತಿ ಪ್ರದೇಶದ ವಿಸ್ತಾರ ಹೆಚ್ಚುತ್ತಿರುವುದರಿಂದ ಮರಗಿಡಗಳಿದ್ದ ಜಾಗವನ್ನೆಲ್ಲ ಸಿಮೆಂಟ್ ಕಟ್ಟಡಗಳು ಆಕ್ರಮಿಸಿಕೊಳ್ಳುತ್ತಿವೆ. ಇದರ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ, ಬೀಳುವ ಮಳೆಯ ಪ್ರಮಾಣ ತಗ್ಗಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಎಲ್ಲರೂ ಎತ್ತೆಚ್ಚುಕೊಂಡು ಅರಣ್ಯ ನಾಶಕ್ಕೆ ಕಡಿವಾಣ ಹಾಕಿ, ಮರಗಳನ್ನು ಬೆಳೆಸಿ ಎಂದು ಕರೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ, ಸರ್ಕಾರಿ ವಕೀಲೆ ಕುಮುದಿನಿ, ತಹಶೀಲ್ದಾರ್ ಅಜಿತ್‌ಕುಮಾರ್ ರೈ, ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ, ಅರಣ್ಯ ಇಲಾಖೆಯ ಅಧಿಕಾರಿಗಳಾದ ರಾಮಾಂಜಿನೇಯ, ಅಂಬರೀಷ್ ಹಾಜರಿದ್ದರು.