Home News ಪಟಾಕಿಗಳ ಶಬ್ದ ಬಾವಲಿಗಳ ನೆಮ್ಮದಿ ಕೆಡಿಸಿದೆ

ಪಟಾಕಿಗಳ ಶಬ್ದ ಬಾವಲಿಗಳ ನೆಮ್ಮದಿ ಕೆಡಿಸಿದೆ

0

ನಗರದ ಹೊರವಲಯದಲ್ಲಿನ ಬಾವಲಿ ಮರಗಳ ಕೆಳಗೆ ಜನ ವಿವೇಚನಾ ರಹಿತವಾಗಿ ಸಿಡಿಸುವ ಪಟಾಕಿಗಳ ಶಬ್ದ ಬಾವಲಿಗಳ ನೆಮ್ಮದಿ ಕೆಡಿಸಿದೆ.
ಪಟಾಕಿ ಸಿಡಿಸಿದಾಗ ಉಂಟಾಗುವ ಭಾರಿ ಶಬ್ದ ಮತ್ತು ಹೊಗೆಯಿಂದ ಕಂಗೆಟ್ಟ ಬಾವಲಿಗಳು ಭಯದಿಂದ ಕೊಂಬೆಗಳನ್ನು ಬಿಟ್ಟು ಬಾನೆತ್ತರದಲ್ಲಿ ಚೀರುತ್ತಾ ಹಾರುವ ದೃಶ್ಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಈ ಮರಗಳು ನಗರದ ಚಿಂತಾಮಣಿ ರಸ್ತೆಯಲ್ಲಿನ ನಗರ ಸಭೆ ಉದ್ಯಾನವನದ ಆಸುಪಾಸಿನಲ್ಲಿವೆ. ಇಲ್ಲಿ ಸಾವಿರಾರು ಬಾವಲಿಗಳು ಬೀಡುಬಿಟ್ಟಿವೆ. ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಪಟಾಕಿ ಸಿಡಿಸುವುದು ಮಾಮೂಲಾಗಿದೆ.
ಬಾವಲಿಗಳು ಎಲ್ಲೆಂದರಲ್ಲಿ ಇರುವುದಿಲ್ಲ. ಎತ್ತರವಾದ, ಆದರೆ ಅಲ್ಲಿನ ಎತ್ತರದ ಮರಗಳಲ್ಲಿ ಮನೆ ಮಾಡಿಕೊಂಡಿರುವ ಬಾವಲಿಗಳು ಸಿಡಿ ಮದ್ದಿನ ಶಬ್ದ, ಹೊಗೆ ಮತ್ತು ವಾಸನೆ ಯಿಂದ ಬಳಲಿ ರೆಕ್ಕೆ ಬಿಚ್ಚಿ ಚೀರುತ್ತ ಹಾರಿ ಮನುಷ್ಯನ ವಿವೇಚನಾ ರಹಿತ ಕೃತ್ಯದ ಬಗ್ಗೆ ಸಾರುತ್ತವೆ.
ಇಷ್ಟಾದರೂ ಈ ಅಪರೂಪದ ಹಾರಾಡುವ ಸಸ್ತನಿಗಳು ಮರಗಳು ಹಾಗೂ ತಮಗೆ ತೊಂದರೆ ಇರದ ಕಡೆ ಅವು ಗುಂಪು ಗುಂಪಾಗಿ ಜಮಾಯಿಸುತ್ತವೆ. ನಿಶಾಚರ ಜೀವಿಗಳಾದ ಇವು ರಾತ್ರಿ ವೇಳೆ ತಮ್ಮ ಆಹಾರವನ್ನು ಹುಡುಕಿಕೊಂಡು ಹೋಗುತ್ತವೆ. ಹಗಲಿನಲ್ಲಿ ಈ ಎತ್ತರದ ಮರಗಳಲ್ಲಿ ಬೀಡು ಬಿಡುತ್ತವೆ. ರೈತನಿಗೆ ಮಾರಕವಾದ ಕೀಟಗಳನ್ನು ಇವು ತಿನ್ನುವುದರಿಂದ ಉಪಕಾರಿ ಪ್ರಾಣಿಯಾಗಿದೆ. ಬಾವಲಿಗಳು ನಗರದ ಹೆಮ್ಮೆ. ಹಗಲು ಹೊತ್ತಿನಲ್ಲಿ ಮರಗಳಿಗೆ ತಲೆ ಕೆಳಗಾಗಿ ಜೋತು ಬಿದ್ದಿರುವ ಸಾವಿರಾರು ಬಾವಲಿಗಳು ಹೊರ ಊರುಗಳಿಂದ ಬರುವ ಪ್ರಯಾಣಿಕರ ಗಮನ ಸೆಳೆಯುತ್ತವೆ.
ಜನಸಂದಣಿಯಿಂದಾಗಿ ರಕ್ಷಣೆ ದೊರೆಯುವುದರಿಂದ ಅವು ಕೆಲವು ದಶಕಗಳಿಂದ ಈ ಮರಗಳನ್ನು ಆಶ್ರಯಿಸಿವೆ. ಬಾವಲಿ ಮರಗಳ ಹತ್ತಿರ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು. ಅವು ವಾಸಿಸುವ ಪ್ರದೇಶವನ್ನು ರಕ್ಷಿತ ಪ್ರದೇಶ ಎಂದು ಘೋಷಿಸಬೇಕು ಎಂಬುದು ಪರಿಸರವಾದಿಗಳ ಆಶಯ. ಇದಕ್ಕೆ ನಗರಸಭೆ ಕ್ರಮಕೈಗೊಳ್ಳಬೇಕು.