ಶಿಡ್ಲಘಟ್ಟದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನ್ಯಾಯಾಧೀಶರಾಗಿ ಆಯ್ಕೆಯಾದ ಬಿ.ಎನ್.ರಮೇಶ್‌ಬಾಬುರವರನ್ನು ತಾಲ್ಲೂಕು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್.ಶೀಲಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಹಾಜರಿದ್ದು ರಮೇಶ್‌ಬಾಬುರವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಸ್ವಭಾವ, ಕಾರ್ಯವೈಖರಿ, ಸ್ನೇಹಶೀಲತೆ ಹಾಗೂ ವೃತ್ತಿಪರತೆಯನ್ನು ಕೊಂಡಾಡಿದರು. ಗ್ರಾಮಾಂತರ ಪ್ರದೇಶವಾದ ತಾಲ್ಲೂಕಿನ ಬಚ್ಚಹಳ್ಳಿ ಮೂಲದವರಾಗಿದ್ದು, ತಾಲ್ಲೂಕಿನಲ್ಲಿ ನ್ಯಾಯಾಲಯ ಪ್ರಾರಂಭವಾದಾಗಿನಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಪ್ರಥಮ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿ ಮಾದರಿಯಾಗಿದ್ದಾರೆಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎನ್.ರಮೇಶ್‌ಬಾಬು, ನ್ಯಾಯಾಧೀಶನಾಗಿ ಆಯ್ಕೆಯಾದ ಕೀರ್ತಿ ನನ್ನೊಬ್ಬನಿಗೆ ಸಲ್ಲುವುದಿಲ್ಲ. ಅದು ನಮ್ಮ ಹೆತ್ತವರು, ನನ್ನ ಸಹಪಾಠಿಗಳು, ಹಿರಿಯ ವಕೀಲರು ಹಾಗೂ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರು, ಸಿಬ್ಬಂದಿ ಸೇರಿದಂತೆ ನನಗೆ ಸಹಕರಿಸಿದ ಪ್ರೋತ್ಸಾಹಿಸಿದ ಹಾಗೂ ಮಾರ್ಗದರ್ಶನ ಮಾಡಿದ ಎಲ್ಲರಿಗೂ ಸಲ್ಲುತ್ತದೆ. ಅವರು ನ್ಯಾಯಾಧೀಶರ ಪರೀಕ್ಷೆಯನ್ನು ತೆಗೆದುಕೊಂಡು ಹೆಚ್ಚಿನ ಅಂಕಗಳಿಸಿ ಆಯ್ಕೆಯಾಗುವ ಪ್ರತಿ ಹಂತದಲ್ಲೂ ಸಹಕಾರ ನೀಡಿ, ಪ್ರೋತ್ಸಾಹಿಸಿದ ಎಲ್ಲರನ್ನೂ ನೆನಪಿಸಿಕೊಂಡರು.
ಈ ಸಮಾಜದಲ್ಲಿ ಜನರು ದೇವಾಲಯದಲ್ಲಿ ಹಾಗೂ ನ್ಯಾಯಾಲಯದಲ್ಲಿ ಮಾತ್ರವೇ ಕೈ ಮುಗಿದು ನಿಲ್ಲುತ್ತಾರೆ. ಅಂತಹ ಪವಿತ್ರವಾದ ನ್ಯಾಯಾಲಯದಲ್ಲಿ ನ್ಯಾಯದಾನ ನೀಡುವಂತ ಪವಿತ್ರ ಸ್ಥಾನ ನಿಮ್ಮದೆನ್ನುವ ಅರಿವು ಸದಾ ಜಾಗೃತರಾಗಿರಲಿ. ಹಿರಿಯರಿಗೆ ಗೌರವ ಕೊಡಿ, ಸಿಬ್ಬಂದಿಗೂ ಮರ್ಯಾದೆ ನೀಡಿ, ಮಹಿಳಾ ಸಿಬ್ಬಂದಿಯನ್ನು ಮಾನವೀಯತೆಯ ನೆಲಗಟ್ಟಿನಲ್ಲಿ ನೋಡಿ. ಆದರೆ ನ್ಯಾಯದಾನ ಮಾಡುವಾಗ ಮಾತ್ರ ನ್ಯಾಯ ಧರ್ಮವನ್ನಷ್ಟೆ ಪಾಲಿಸಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ಈ ಸಂದರ್ಭದಲ್ಲಿ ಕಿವಿ ಮಾತು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್.ಶೀಲಾ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ವಕೀಲರಾದ ಶ್ರೀನಾಥ್, ಸತ್ಯನಾರಾಯಣ ಬಾಬು, ಅಶೋಕ್, ಈ.ನಾರಾಯಣಪ್ಪ, ಕೆ.ಮಂಜುನಾಥ್, ಎಂ.ಬಿ.ಲೋಕೇಶ್, ಬಿ.ಕೆ.ವೆಂಕಟೇಶ್, ವಿ.ಸುಬ್ರಮಣ್ಯಪ್ಪ, ಲಕ್ಷ್ಮಿ, ವೀಣಾ, ನಾಗಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -