Home News ನೈರ್ಮಲ್ಯಕ್ಕಾಗಿ ಒತ್ತಾಯಪಡಿಸುವ ಕಾರ್ಯಾಗಾರ

ನೈರ್ಮಲ್ಯಕ್ಕಾಗಿ ಒತ್ತಾಯಪಡಿಸುವ ಕಾರ್ಯಾಗಾರ

0

ಪ್ರತಿಯೊಂದು ಮನೆಯಲ್ಲಿಯೂ ವೈಯಕ್ತಿಕ ಶೌಚಾಲಯ ನಿರ್ಮಾಣ ಸೇರಿದಂತೆ ಅಸುರಕ್ಷಿತ ತಿಪ್ಪೆಗುಂಡಿಗಳನ್ನು ಗ್ರಾಮದ ಹೊರಗೆ ಸಾಗಿಸುವುದು ಹಾಗೂ ಸಾರ್ವಜನಿಕರಲ್ಲಿ ಮತ್ತು ಮಕ್ಕಳಲ್ಲಿ ವೈಯಕ್ತಿಕ ಶುಚಿತ್ವದ ಗುಣಗಳು ಬೆಳೆಸಿಕೊಂಡಾಗ ಮಾತ್ರ ಉತ್ತಮ ಆರೋಗ್ಯಮಟ್ಟ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯ ಎಂದು ತಾಲ್ಲೂಕು ಪಂಚಾಯತಿ ಇಓ ಸಿ.ಎಸ್.ಶ್ರೀನಾಥಗೌಡ ಹೇಳಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಚಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನೈರ್ಮಲ್ಯಕ್ಕಾಗಿ ಒತ್ತಾಯಪಡಿಸುವ ತಾಲ್ಲೂಕು ಮಟ್ಟದ ಕಾರ್ಯಾಗಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶಿಡ್ಲಘಟ್ಟ ತಾಲ್ಲೂಕಿಗೆ ಮೂರು ಕಂತುಗಳಲ್ಲಿ ಸುಮಾರು ಎರಡು ಕೋಟಿಯಷ್ಟು ಅನುದಾನ ಜಿಲ್ಲಾ ಪಂಚಾಯತಿಯಿಂದ ಬಿಡುಗಡೆಯಾಗಿದ್ದು ಮಾರ್ಚ್ ೦೧ ರಿಂದ ಮಾ ೦೯ ರವರೆಗೂ ನಡೆಯುತ್ತಿರುವ ಈ ನೈರ್ಮಲ್ಯಕ್ಕಾಗಿ ಒತ್ತಾಯಿಸುವ ಕಾರ್ಯಕ್ರಮದಲ್ಲಿ ಎಲ್ಲಾ ಸಾರ್ವಜನಿಕರು ಗ್ರಾಮ ಪಂಚಾಯತಿಯ ನೆರವು ಪಡೆಯಬಹುದು ಎಂದರು.
ಈ ಯೋಜನೆಯ ಲಾಭವನ್ನು ಎಲ್ಲಾ ಕುಟುಂಬಗಳು ಪಡೆದುಕೊಳ್ಳುವ ಮೂಲಕ ಬಯಲು ಮಲವಿಸರ್ಜನೆ ಮುಕ್ತ ಗ್ರಾಮಗಳನ್ನು ನಿರ್ಮಿಸಲು ಎಲ್ಲಾ ಚುನಾಯಿತ ಪ್ರತಿನಿಧಿಗಳು ಶಪಥ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಸಿಡಿಪಿಓ ಲಕ್ಷ್ಮೀದೇವಮ್ಮ, ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್.ಆರ್.ಭವ್ಯ ಮಂಜುನಾಥ್, ಪಿಡಿಓ ರಾಮಚಂದ್ರಪ್ಪ, ಮುಖಂಡರಾದ ನಾರಾಯಣಸ್ವಾಮಿ, ಹರಿನಾಥ್, ಮುನಿಯಪ್ಪ ಮತ್ತಿತರರು ಹಾಜರಿದ್ದರು.